ತೂತುಕುಡಿ(ತಮಿಳುನಾಡು): ತೂತುಕುಡಿಯಲ್ಲಿ ಇಬ್ಬರು ನಾಗರಿಕರ ಸಾವಿಗೆ ಕಾರಣರಾದ ಅಧಿಕಾರಿಗಳ ವಿರುದ್ಧ ತನಿಖೆ ನಡೆಸುವಂತೆ ಡಿಎಂಕೆ ಸಂಸದೆ ಕನಿಮೋಳಿ ನವದೆಹಲಿಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ಪತ್ರ ಬರೆದಿದ್ದಾರೆ.
ಮೃತರನ್ನು ಜಯರಾಜ್ ಮತ್ತು ಅವರ ಮಗ ಬೆನ್ನಿಕ್ಸ್ ಎಂದು ಗುರುತಿಸಲಾಗಿದೆ. ಅಂತಹ ಘಟನೆಗಳ ಬಗ್ಗೆ ಗಮನ ಸೆಳೆಯಲು ಮಾನವ ಹಕ್ಕುಗಳ ಸಂರಕ್ಷಣಾ ಕಾಯ್ದೆಯಡಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ಅಧಿಕಾರವಿದೆ ಎಂದು ಕನಿಮೋಳಿ ಪತ್ರದಲ್ಲಿ ತಿಳಿಸಿದ್ದಾರೆ.
"ತನಿಖೆಯ ಸೋಗಿನಲ್ಲಿ ಪೊಲೀಸರು ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಪೊಲೀಸ್ ಅಧಿಕಾರಿಗಳು ಬೆನ್ನಿಕ್ಸ್ನ ಗುದದ್ವಾರಕ್ಕೆ ದಂಡವನ್ನು ಹಾಕಿದ ಕಾರಣ ಅದು ಅನಿಯಂತ್ರಿತ ರಕ್ತಸ್ರಾವಕ್ಕೆ ಕಾರಣವಾಗಿದೆ. ಪೊಲೀಸ್ ಅಧಿಕಾರಿಗಳು ಜಯರಾಜ್ ಅವರ ಎದೆಗೆ ಹೊಡೆದಿದ್ದಾರೆ. ಈ ಕಾರಣಗಳಿಂದ ಅವರಿಬ್ಬರೂ ಮೃತಪಟ್ಟಿದ್ದಾರೆ"ಎಂದು ಸಂಸದೆ ಕನಿಮೋಳಿ ಪತ್ರದಲ್ಲಿ ವಿವರಿಸಿದ್ದಾರೆ.
ತಂದೆ - ಮಗ ಈ ಪ್ರದೇಶದಲ್ಲಿ ಮರದ ಕೆಲಸ ಮತ್ತು ಮೊಬೈಲ್ ಅಂಗಡಿ ನಡೆಸುತ್ತಿದ್ದರು. ಅವರು ಸಮಾಜದ ಗೌರವಾನ್ವಿತ ಸದಸ್ಯರಾಗಿದ್ದರು. ಲಾಕ್ಡೌನ್ ನಿರ್ಬಂಧಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ವಿಚಾರಣೆ ನಡೆಸುತ್ತ ಪೊಲಿಸರು ಹಲ್ಲೆ ನಡೆಸಿದ್ದಾರೆ. ಮಾನವ ಹಕ್ಕುಗಳ ಉಲ್ಲಂಘನೆ ಮಾಡಿದ ಎಲ್ಲ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕನಿಮೋಳಿ ಮಾನವ ಹಕ್ಕುಗಳ ಆಯೋಗಕ್ಕೆ ಪತ್ರ ಬರೆದಿದ್ದಾರೆ.