ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಬಂಧನದಲ್ಲಿರುವ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಆರೋಗ್ಯದಲ್ಲಿ ಏರುಪೇರು ಕಂಡು ಬಂದಿದೆ. ಹಾಗಾಗಿ ಅವರನ್ನು ದೆಹಲಿಯ ಆರ್ಎಂಎಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.
ಅತಿಸಾರ ಹಾಗೂ ರಕ್ತದೊತ್ತಡದಿಂದ ಬಳಲುತ್ತಿರುವ ಕಾರಣ ಆರ್ಎಂಎಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.
ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಕೆ ಶಿವಕುಮಾರ್ ಮಗಳು ಐಶ್ವರ್ಯಾ ಇಂದು ಜಾರಿ ನಿರ್ದೇಶನಾಲಯದಿಂದ ವಿಚಾರಣೆಗೊಳಪಟ್ಟಿದ್ದು, ವಿವಿಧ ಕಂಪನಿಗಳಲ್ಲಿ ಅವರ ಹೆಸರಿನಲ್ಲಿ ಹೂಡಿಕೆ ಮಾಡಿರುವ ಕಾರಣ ವಿಚಾರಣೆ ನಡೆಸಲಾಗಿದೆ. ಐಶ್ವರ್ಯಾ ಅವರನ್ನು ಜಾರಿ ನಿರ್ದೇಶನಾಲಯದ ವಿಚಾರಣೆಗೆ ಒಳಪಡಿಸಿರುವ ಸುದ್ದಿ ತಿಳಿದ ಡಿಕೆ ಶಿವಕುಮಾರ್ ಅವರಿಗೆ ಆರೋಗ್ಯದಲ್ಲಿ ಏರುಪೇರಾಗಿದೆ ಎಂಬ ಮಾಹಿತಿಯೂ ಹೊರಬಿದ್ದಿದೆ.
ಡಿಕೆ ಶಿವಕುಮಾರ್ ಅವರ ನವದೆಹಲಿ ನಿವಾಸದಲ್ಲಿ 8.59 ಕೋಟಿ ರೂ. ಅಕ್ರಮ ಹಣ ಪತ್ತೆಯಾಗಿತ್ತು. ಈ ಕುರಿತ ವಿಚಾರಣೆಗೆ ಹಾಜರಾಗುವಂತೆ ಇಡಿ ಸಮನ್ಸ್ ಜಾರಿಗೊಳಿಸಿತ್ತು. ಆ. 30ರಂದು ಡಿಕೆಶಿ ವಿಚಾರಣೆಗೆ ಹಾಜರಾಗಿದ್ದು,ಅವರು ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸುತ್ತಿಲ್ಲ ಎಂದು ಅಧಿಕಾರಿಗಳು ಹೇಳಿದ್ದರು. ಹೀಗಾಗಿ ಹೆಚ್ಚಿನ ವಿಚಾರಣೆಗಾಗಿ ಮಾಜಿ ಸಚಿವರನ್ನು ಬಂಧಿಸಿ ವಿಚಾರಣೆ ನಡೆಸಿದ್ದರು. ತದನಂತರ ಕೋರ್ಟ್ನಲ್ಲಿ ವಿಚಾರಣೆ ನಡೆದು, 10 ದಿನಗಳ ಕಾಲ ಡಿಕೆಶಿಯನ್ನು ಇಡಿ ವಶಕ್ಕೆ ಒಪ್ಪಿಸಲಾಗಿತ್ತು. ನಾಳೆ ಈ ವಿಚಾರಣಾ ಕಾಲಾವಧಿ ಮುಕ್ತಾಯಗೊಳ್ಳಲಿದೆ.
ಇನ್ನು ಐಶ್ವರ್ಯ ಅವರಿಗೆ ಸಾಕಷ್ಟು ಪ್ರಶ್ನೆಗಳನ್ನು ಕೇಳಿ ತೀವ್ರವಾಗಿ ವಿಚಾರಣೆ ನಡೆಸಿರುವ ಜಾರಿ ಅಧಿಕಾರಿಗಳು ಸಂಜೆ ವೇಳೆ ಅವರನ್ನು ಬಿಡುಗಡೆಗೊಳಿಸಿದ್ದಾರೆ.