ಅಹಮದಾಬಾದ್ : ಮೇ 23ರಂದು ಒಂದು ವೇಳೆ ಏನಾದಾರೂ ಅಪ್ಪಿತಪ್ಪಿ ಕಾಂಗ್ರೆಸ್ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಬಿಟ್ಟರೇ, ಖಂಡಿತಾ ಪಾಕ್‌ನಲ್ಲಿ ದೀಪಾವಳಿ ಆಚರಣೆಯಾಗುತ್ತೆ. ಪಟಾಕಿಗಳು ಸಿಡಿಯುತ್ತವೆ. ಪಾಕ್‌ನ ಸಂಭ್ರಮದ ಜತೆಗೇ ಕಾಂಗ್ರೆಸ್‌ನವರೂ ಸೇರಿಕೊಳ್ತಾರೆ. ಹಾಗಾಗಿ ಕಾಂಗ್ರೆಸ್ ಗೆಲ್ಲಲು ಯಾವುದೇ ಕಾರಣಕ್ಕೂ ಬಿಡಬಾರದು ಅಂತಾ ಗುಜರಾತ್ ಸಿಎಂ ವಿಜಯ ರೂಪಾನಿ ಹೇಳಿದ್ದಾರೆ.
ಮೆಹಸಾನಾದಲ್ಲಿ ನಡೆದ ಬಿಜೆಪಿ ವಿಜಯ ಸಂಕಲ್ಪ್ ಸಮಾವೇಶದಲ್ಲಿ ಮಾತನಾಡಿದ ಅವರು, ಬಾಲಾಕೋಟ್ ಏರ್‌ಸ್ಟ್ರೈಕ್ ಬಗ್ಗೆ ಸಾಕ್ಷ್ಯ ಕೇಳಿದ್ದ ಕಾಂಗ್ರೆಸ್ ನಾಯಕ ಸ್ಯಾಮ್ ಪಿಟ್ರೋಡಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಾಕ್ ಉಗ್ರರ ತಾಣ ಎಂಬುದು ಇಡೀ ಜಗತ್ತಿಗೇ ಗೊತ್ತು. ಇಷ್ಟಿದ್ದರೂ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಟೀಚರ್ ಸ್ಯಾಮ್ ಪಿಟ್ರೋಡಾ, ಯಾರೋ ಐದಾರು ಜನ ಪುಲ್ವಾಮಾ ದಾಳಿ ನಡೆಸಿದ್ರೇ, ಇಡೀ ಪಾಕಿಸ್ತಾನವನ್ನೇ ಹೊಣೆ ಮಾಡೋದು ತಪ್ಪು ಅಂತ ಹೇಳ್ತಾರೆ. ಇದು ಪಾಕ್ ಲೀಡರ್ ಹೇಳಿಕೆ ರೀತಿಯಿದೆ ಅಂತಾ ವಿಜಯ ರೂಪಾನಿ ಕಿಡಿಕಾರಿದರು.
ಪ್ರತಿಪಕ್ಷಗಳುಸೇನಾ ಪಡೆಗಳ ಮೇಲೆ ಅಪಮಾನ ಮಾಡುತ್ತಿವೆ. ಕಳೆದ ಎನ್‌ಡಿಎ ಸರ್ಕಾರದ ಅವಧಿಯಲ್ಲಿ ಉಗ್ರ ಮಸೂದ್ ಅಜರ್ ಬಿಟ್ಟಿದ್ದರಿಂದ ಆತ ಜೈಷ್-ಇ ಮೊಹ್ಮದ್ ಉಗ್ರ ಸಂಘಟನೆ ಕಟ್ಟಿ, ಭಾರತದ ವಿರುದ್ಧ ವಿಧ್ವಂಸಕ ಕೃತ್ಯ ನಡೆಸುತ್ತಿದ್ದಾನೆಂದು ಕಾಂಗ್ರೆಸ್ ಹೇಳುತ್ತಿದೆ. ಆದರೆ, ಕಾಂಗ್ರೆಸ್ ಆಡಳಿತಾವಧಿಯಲ್ಲೂ ಸಾಕಷ್ಟು ಉಗ್ರರ ಬಿಡುಗಡೆಯಾಗಿತ್ತು ಅಂತ ರೂಪಾನಿ ಹೇಳಿದರು. ವೋಟ್‌ಬ್ಯಾಂಕ್ ಪಾಲಿಟಿಕ್ಸ್ ಮಾಡ್ತಿರುವ ಕಾಂಗ್ರೆಸ್ ಪ್ರತ್ಯೇಕತಾವಾದಿಗಳಿಗೆ ಬೆಂಬಲವಾಗಿ ನಿಲ್ಲುತ್ತಿದೆ ಅಂತಾ ಆರೋಪಿಸಿದರು.
ಪಿಎಂ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಗುಜರಾತ್‌ನ ಪುತ್ರರು. ದೇಶ ಜಗತ್ತಿನ ಮುಂದೆ ತಲೆ ಎತ್ತಿ ನಿಲ್ಲಲು ಶ್ರಮಿಸುತ್ತಿದ್ದಾರೆ. ಒಡೆದು ಹೋದವರೆಲ್ಲ ಈಗ ಮೋದಿ ಸೋಲಿಸೋದಕ್ಕೆಂದೇ ಒಂದಾಗಿದ್ದಾರೆ. ಆದರೆ, ಮೋದಿ ರಾಮರಾಜ್ಯ ಮಾಡುವ ಗುರಿ ಹೊಂದಿದ್ದಾರೆ. ಆದರೆ, ಕಾಂಗ್ರೆಸ್, ಕಮ್ಯುನಿಸ್ಟ್‌ಗಳು, ಟೆರೆರಿಸ್ಟ್‌ಗಳು, ನಕ್ಸಲರು, ಭ್ರಷ್ಟಾಚಾರಿಗಳು, ಮಮತಾ, ಮಾಯಾವತಿ, ಅಖಿಲೇಶ್, ಚಂದ್ರಬಾಬು ಹೀಗೆ ಎಲ್ಲ ಸ್ವಹಿತಾಸಕ್ತಿ ಹೊಂದಿರುವ ಜನರೆಲ್ಲ ಮೋದಿ ಸೋಲಿಸಲು ಒಂದಾಗಿದ್ದಾರೆ ಅಂತಾ ರೂಪಾನಿ ಆರೋಪಿಸಿದ್ದಾರೆ.