ಚೆನ್ನೈ: ಐಎನ್ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪ ಎದುರಿಸುತ್ತಿರುವ ಪಿ ಚಿದಂಬರಂ ಅವರನ್ನು 2 ವರ್ಷಗಳ ಸತತ ಪ್ರಯತ್ನದ ಬಳಿಕ ಇಡಿ ಅಧಿಕಾರಿಗಳು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತಂದೆ ಮಾಜಿ ಕೇಂದ್ರ ಸಚಿವ ಚಿದಂಬರಂ ಬಂಧನದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾರ್ತಿ ಚಿದಂಬರಂ, ಇದು ಆರ್ಟಿಕಲ್ 370 ಹಾಗೂ 35 ಎ ವಿಧಿಗಳನ್ನ ರದ್ದು ಮಾಡಿರುವ ವಿವಾದದ ಲಕ್ಷ್ಯವನ್ನ ಬೇರೆಡೆ ಸೆಳೆಯಲು ಕೇಂದ್ರ ಸರ್ಕಾರ ಈ ಬಂಧನಕ್ಕೆ ಕೈ ಹಾಕಿದೆ ಎಂದು ಆರೋಪಿಸಿದ್ದಾರೆ.
ಇದು ರಾಜಕೀಯವಾಗಿ ಕೈಗೊಂಡ ನಿರ್ಧಾರವಾಗಿದೆ. ಈ ಪ್ರಕರಣದಲ್ಲಿ ತಂದೆಯವರನ್ನ ಬಂಧಿಸಲು ಯಾವುದೇ ಸೂಕ್ತ ಆಧಾರಗಳಾಗಲಿ ಕಾರಣಗಳಾಗಲಿ ಇರಲಿಲ್ಲ ಎಂದು ಕಾರ್ತಿ ಚಿದಂಬರಂ ಹೇಳಿದ್ದಾರೆ.
ಪಿ. ಚಿದಂಬರಂ ಬಂಧನದ ಹಿಂದಿದೆಯಾ ಅಮಿತ್ ಶಾ ಸೇಡು...!
ಈ ಪ್ರಕರಣ ನಡೆದಿದ್ದು 2008 ರಲ್ಲಿ ಆದರೆ ಎಫ್ಐಆರ್ ದಾಖಲಾಗಿದ್ದು 2017 ರಲ್ಲಿ. ನನ್ನ ಮೇಲೆ ನಾಲ್ಕು ಬಾರಿ ದಾಳಿ ಮಾಡಲಾಗಿದೆ. 20 ಬಾರಿ ಸಮನ್ಸ್ ಜಾರಿ ಮಾಡಲಾಗಿದೆ. ಪ್ರತಿ ಸಮನ್ಸ್ಗೆ ನಾನು ಕನಿಷ್ಠ 10-12 ಗಂಟೆ ವಿಚಾರಣೆ ಎದುರಿಸಿದ್ದೇನೆ. 11 ದಿನಗಳ ಕಾಲ ನಾನು ಐಟಿ ಇಲಾಖೆ ಅಧಿಕಾರಿಗಳಿಗೆ ಅತಿಥಿಯಾಗಿದ್ದೆ. ರಿಮೋಟ್ ಕಂಟ್ರೋಲ್ ಮೂಲಕ ತಮ್ಮನ್ನು ವಿಚಾರಣೆಗೊಳಪಡಿಸಲಾಗುತ್ತಿತ್ತು. ಇದುವರೆಗೂ ತಮ್ಮ ಮೇಲೆ ಚಾರ್ಜ್ಶೀಟ್ ಸಲ್ಲಿಸಲು ಇಡಿಗೆ ಸಾಧ್ಯವಾಗಿಲ್ಲ. ಯಾವುದೇ ಕಾರಣಕ್ಕೂ ಐಎನ್ಎಕ್ಸ್ ಮೀಡಿಯಾಗೂ ನನಗೂ ಯಾವುದೇ ಲಿಂಕ್ ಇಲ್ಲ ಎಂದು ಕಾರ್ತಿ ಚಿದಂಬರಂ ಸ್ಪಷ್ಟನೆ ನೀಡಿದ್ದಾರೆ.