ಧರ್ಮಪುರಿ(ತಮಿಳುನಾಡು): ಅಕ್ರಮವಾಗಿ ಮದ್ಯ ಸಂಗ್ರಹ ಮಾಡಿರುವ ಕುರಿತು ಸಾರ್ವಜನಿಕರು ದೂರು ನೀಡಿದ್ರು ಪೊಲೀಸರು ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಸ್ವತಃ ಸಂಸದರೇ ದಾಳಿ ನಡೆಸಿ ಅಕ್ರಮ ಮದ್ಯದ ಬಾಟಲಿಗಳನ್ನು ವಶಪಡಿಸಿಕೊಂಡಿರುವ ಘಟನೆ ನಡೆದಿದೆ.
ತಾವೇ ಫೀಲ್ಡಿಗಿಳಿದು ಅಕ್ರಮ ಮದ್ಯ ಸೀಜ್ ಮಾಡಿದ ಧರ್ಮಪುರಿ ಸಂಸದ - ಅಕ್ರಮವಾಗಿ ಮದ್ಯ ಮಾರುವ ಮನೆ ಮೇಲೆ ಸಂಸದರಿಂದಲೇ ದಾಳಿ ಸುದ್ದಿ
ತಮಿಳುನಾಡಿನ ಧರ್ಮಪುರಿ ಕ್ಷೇತ್ರದ ಸಂಸದ ಸೆಂಥಿಲ್ ಕುಮಾರ್ ಅವರು ತಾವೇ ಖುದ್ದು ಅಕ್ರಮವಾಗಿ ಮದ್ಯ ಸಂಗ್ರಹಿಸಿದ್ದ ಮನೆ ಮೇಲೆ ದಾಳಿ ನಡೆಸಿದರು.
ಧರ್ಮಪುರಿ ಕ್ಷೇತ್ರದ ಸಂಸದ ಸೆಂಥಿಲ್ ಕುಮಾರ್ ತಾವೇ ಫೀಲ್ಡಿಗಿಳಿದು ಅಕ್ರಮವಾಗಿ ಸಂಗ್ರಹಿಸಿದ್ದ ಸುಮಾರು 177 ಮದ್ಯದ ಬಾಟಲಿಗಳನ್ನು ವಶಪಡಿಸಿಕೊಂಡಿದ್ದಾರೆ. ಧರ್ಮಪುರಿ ಜಿಲ್ಲೆಯ ನಲ್ಲಂಪಲ್ಲಿ ಪ್ರದೇಶದ ನಿವಾಸಿಗಳು ಈ ಭಾಗದಲ್ಲಿ 24 ಗಂಟೆಗಳ ಕಾಲವೂ ಮದ್ಯ ಮಾರಾಟ ಮಾಡ್ತಾರೆ ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದಾರೆ. ಆದರೆ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ನಂತರ ಈ ವಿಚಾರ ಸಂಸದ ಸೆಂಥಿಲ್ ಕುಮಾರ್ ಅವರ ಗಮನಕ್ಕೆ ಬಂದಿದ್ದು, ಅವರೇ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.
ಸಂಸದರು ದಾಳಿ ನಡೆಸಿ ಅಕ್ರಮವಾಗಿ ಮದ್ಯ ಮಾರುವ ಮನೆ ಜಾಲಾಡಿದಾಗ ಮದ್ಯದ ಬಾಟಲಿಗಳನ್ನು ಹಾಸಿಗೆಗಳು, ರೆಫ್ರಿಜರೇಟರ್ ಮುಂತಾದ ಕಡೆ ಸಂಗ್ರಹಿಸಿಟ್ಟಿದ್ದು ಬೆಳಕಿಗೆ ಬಂದಿದೆ. ಬಳಿಕ ಪೊಲೀಸರು ಕೂಡ ಸ್ಥಳಕ್ಕೆ ಧಾವಿಸಿ ಮದ್ಯದ ಬಾಟಲಿಗಳನ್ನು ವಶಪಡಿಸಿಕೊಂಡಿದ್ದಾರೆ.