ಬಳ್ಳಾರಿ/ಕರ್ನೂಲ್: ಪೊಲೀಸ್ ಇಲಾಖೆಯ ನಿರ್ಬಂಧ, ಕೋವಿಡ್ ಭೀತಿಯನ್ನು ಮೀರಿ ಕರ್ನಾಟಕ - ಆಂಧ್ರಪ್ರದೇಶದ ಗಡಿ ಜಿಲ್ಲೆಯಾದ ಕರ್ನೂಲ್ನಲ್ಲಿ 'ಬಡಿಗೆ ಬಡಿದಾಟ' ಹಬ್ಬ ಬಲು ಜೋರಾಗಿ ನಡೆದಿದೆ.
ಆಂಧ್ರದ ಕರ್ನೂಲ್ ಜಿಲ್ಲೆಯ ದೇವರಗಟ್ಟು ಗ್ರಾಮದಲ್ಲಿ ದಸರಾ (ಬನ್ನಿ ಉತ್ಸವ) ಪ್ರಯುಕ್ತ ಪ್ರತಿವರ್ಷ ಬಡಿಗೆ ಬಡಿದಾಟ ಹಬ್ಬವನ್ನು ಆಚರಿಸಲಾಗುತ್ತದೆ. ಮಾಳವಿ ಮಲ್ಲೇಶ್ವರ ಸ್ವಾಮಿಯ ಸನ್ನಿಧಾನದಲ್ಲಿ ನಡೆಯುವ ಈ ಹಬ್ಬ 'ದೇವರಗಟ್ಟು ಬಡಿಗೆ ಬಡಿದಾಟ' ಎಂದೇ ಪ್ರಸಿದ್ಧಿ ಪಡೆದಿದೆ. ಇಲ್ಲಿ ಬಡಿಗೆ (ಕೋಲು/ದೊಣ್ಣೆ)ಯಲ್ಲಿ ಸಾವಿರಾರು ಜನರು ಒಬ್ಬರಿಗೊಬ್ಬರು ಹೊಡೆದಾಡಿಕೊಳ್ಳುತ್ತಾರೆ. ಬಳ್ಳಾರಿ ಸೇರಿದಂತೆ ನಾನಾ ಭಾಗಗಳಿಂದ ಸಾವಿರಾರು ಭಕ್ತರು ಇಲ್ಲಿ ಪಾಲ್ಗೊಳ್ಳುತ್ತಾರೆ.
ಪೊಲೀಸರು, ಕೊರೊನಾ ಲೆಕ್ಕಿಸದೇ 'ದೇವರಗಟ್ಟು ಬಡಿಗೆ ಬಡಿದಾಟ' ಹಬ್ಬ ಆಚರಣೆ ಕೊರೊನಾ ಸೋಂಕು ಹರಡುವ ಕಾರಣದಿಂದ ಈ ಬಾರಿ ಕರ್ನೂಲ್ ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತ ಈ ಆಚರಣೆಯನ್ನು ರದ್ದು ಮಾಡಿ ಆದೇಶ ನೀಡಿತ್ತು. ಆದರೆ ಈ ಆದೇಶವನ್ನು ಜನ ಲೆಕ್ಕಕ್ಕೇ ತೆಗೆದುಕೊಂಡಿಲ್ಲ. ಮಾಸ್ಕ್ ಧರಿಸದೇ, ಸಾಮಾಜಿಕ ಅಂತರ ಕಾಯ್ದುಕೊಳ್ಳದೇ, ಯಾವುದೇ ಕೋವಿಡ್ ನಿಯಮ ಪಾಲಿಸದೇ ಹಬ್ಬ ಆಚರಿಸಲಾಗಿದೆ.
ಸೋಮವಾರ ರಾತ್ರಿ 10 ಗಂಟೆಯ ವರೆಗೂ ದೇವರಗಟ್ಟು ಗ್ರಾಮ ಪೊಲೀಸರ ನಿಯಂತ್ರಣದಲ್ಲಿತ್ತು. 30 ಚೆಕ್ಪೋಸ್ಟ್ಗಳಲ್ಲಿ ಪೊಲೀಸರ ಹಾಗೂ 50 ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಕಣ್ಗಾವಲಿತ್ತು. ಸೆಕ್ಷನ್ 144 ಹೇರಲಾಗಿತ್ತು. ಆದರೆ 10.30 ಗಂಟೆಯಾಗುತ್ತಿದ್ದಂತೆಯೇ ಒಳದಾರಿಗಳಲ್ಲಿ ಬಂದ ಜನರು ಗುಂಪು ಸೇರಿ, ಹಬ್ಬ ಆಚರಣೆ ಮಾಡಿದ್ದಾರೆ.