ನವದೆಹಲಿ:ಸಂಸತ್ ದಾಳಿಕೋರ ಅಫ್ಜಲ್ ಗುರುವನ್ನು ಗಲ್ಲಿಗೇರಿಸಿದ ಏಳು ವರ್ಷಗಳ ಬಳಿಕ, ದೆಹಲಿಯ ತಿಹಾರ್ ಜೈಲು ಇದೀಗ ನಿರ್ಭಯಾ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಅಪರಾಧಿಗಳಿಗೆ ಸಕಲ ಸಿದ್ಧತೆಗಳೊಂದಿಗೆ, ಬಿಗಿ ಭದ್ರತೆಯೊಂದಿಗೆ ಮರಣ ದಂಡನೆ ವಿಧಿಸಲು ಸಿದ್ಧತೆ ನಡೆಸುತ್ತಿದೆ.
ಉತ್ತರ ಕಾಶ್ಮೀರದ ಸೊಪೊರೆ ಪ್ರದೇಶದ ನಿವಾಸಿಯಾದ ಅಫ್ಜಲ್ ಗುರುವನ್ನು 2013ರ ಫೆ.9 ರಂದು ಮುಂಜಾನೆ 8 ಗಂಟೆಗೆ ಗಲ್ಲಿಗೇರಿಸಿ, ತಿಹಾರ್ ಜೈಲಿನ ಆವರಣದಲ್ಲಿ ಸಮಾಧಿ ಮಾಡಲಾಗಿತ್ತು. ಅಂದಿನ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಅಫ್ಜಲ್ನ ಕ್ಷಮಾದಾನ ಅರ್ಜಿಯನ್ನು ಫೆ.3 ರಂದು ತಿರಸ್ಕರಿಸಿದ್ದರು.
ತಿಹಾರ್ ಜೈಲಿನ ಮಾಜಿ ಕಾನೂನು ಅಧಿಕಾರಿ ಸುನಿಲ್ ಗುಪ್ತಾ ಹಾಗೂ ಪತ್ರಕರ್ತ ಸುನೇತ್ರ ಚೌಧರಿ ಬರೆದ 'ಬ್ಲ್ಯಾಕ್ ವಾರಂಟ್' ಪುಸ್ತಕದ ಪ್ರಕಾರ, ಅಫ್ಜಲ್ಗೆ 2006ರ ಅಕ್ಟೋಬರ್ 20 ರಂದೇ ಮರಣ ದಂಡನೆ ದಿನಾಂಕ ನಿಗದಿಯಾಗಿತ್ತು. ಅಫ್ಜಲ್ನ ಪತ್ನಿ ತಬಸ್ಸುಮ್ ಅಂದಿನ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂಗೆ ಕ್ಷಮಾದಾನ ಅರ್ಜಿ ಸಲ್ಲಿಸಿದ್ದರಿಂದ ಗಲ್ಲು ಶಿಕ್ಷೆ ವಿಳಂಬವಾಗಿತ್ತು. ಕಲಾಂ ಅವರ ನಂತರ ಬಂದ ಶ್ರೀಮತಿ ಪ್ರತಿಭಾ ಪಾಟೀಲ್ ಕೂಡ ಈ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಳ್ಳಲಿಲ್ಲ. ಇತರ 34 ಅಪರಾಧಿಗಳಿಗೆ ಪ್ರತಿಭಾ ಪಾಟೀಲ್ ಅವರು ಕ್ಷಮಾದಾನ ನೀಡಿದ್ದರು ಎಂದೂ ಕೂಡ 'ಬ್ಲ್ಯಾಕ್ ವಾರಂಟ್' ಪುಸ್ತಕ ಹೇಳುತ್ತದೆ.
ನಿಗದಿತ ಗಲ್ಲು ಶಿಕ್ಷೆ ದಿನಕ್ಕೂ ಮೊದಲು ಜೈಲಿನ ಅಧಿಕಾರಿಗಳು ಕೈದಿಯ ತೂಕಕ್ಕೆ ಅನುಗುಣವಾಗಿ ಕಲ್ಲು - ಮರಳಿನಿಂದ ತುಂಬಿದ ಚೀಲಗಳೊಂದಿಗೆ ಪ್ರಾಯೋಗಿಕ ಮರಣ ದಂಡನೆಯನ್ನು ಮಾಡುತ್ತಾರೆ. ನೇಣು ಹಾಕಲು ಬಳಸುವ ಹಗ್ಗಗಳನ್ನು 'ಮನಿಲಾ ರೋಪ್ಸ್' ಎಂದು ಕರೆಯಲಾಗುತ್ತದೆ, ಇದನ್ನು ವಿಶೇಷವಾಗಿ ಬಿಹಾರದ ಬಕ್ಸಾರ್ ಜೈಲಿನಿಂದ ತರಿಸಲಾಗುತ್ತದೆ. ಈ ರೀತಿ ಎಲ್ಲ ಪ್ರಯೋಗಗಳೊಂದಿಗೆ, ಬಿಗಿ ಭದ್ರತೆಯೊಂದಿಗೆ ಅಫ್ಜಲ್ ಗುರುವನ್ನು ಗಲ್ಲಿಗೇರಿಸಲಾಗಿತ್ತು. ಇದೀಗ ನಿರ್ಭಯಾ ಅಪರಾಧಿಗಳ ಸರದಿ.
ಈಗಾಗಲೇ ನಿರ್ಭಯಾ ಪ್ರಕರಣದ ನಾಲ್ವರು ಅಪರಾಧಿಗಳಾದ ಮುಖೇಶ್ ಸಿಂಗ್ (32), ಪವನ್ ಗುಪ್ತಾ (25), ವಿನಯ್ ಶರ್ಮಾ (26) ಮತ್ತು ಅಕ್ಷಯ್ ಕುಮಾರ್ ಸಿಂಗ್ಗೆ ಮಾ.20ರ ಬೆಳಗ್ಗೆ 5.30ಕ್ಕೆ ಗಲ್ಲು ಶಿಕ್ಷೆ ನಿಗದಿ ಪಡಿಸಿ ನ್ಯಾಯಾಲಯ ಹೊಸ ಡೆತ್ ವಾರೆಂಟ್ ನೀಡಿದೆ. ಇದು ಇವರಿಗೆ ನೀಡಿದ ನಾಲ್ಕನೇ ಡೆತ್ ವಾರೆಂಟ್ ಆಗಿದ್ದು, ಮಾ.5 ರಂದು ಹೊಸದಾಗಿ ನಾಲ್ಕನೇ ಡೆತ್ ವಾರೆಂಟ್ ನೀಡಿದ ಬಳಿಕ ಗಲ್ಲು ಶಿಕ್ಷೆಗೆ ತಿಹಾರ್ ಜೈಲಿನ ಅಧಿಕಾರಿಗಳು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ.
ಉತ್ತರ ಪ್ರದೇಶದ ಜೈಲು ಅಧಿಕಾರಿಗಳಿಗೆ ಮೀರತ್‌ನ ಹ್ಯಾಂಗ್‌ಮ್ಯಾನ್ ಆಗಿರುವ ಪವನ್ ಜಲ್ಲಾಡ್ ಅವರನ್ನು ತಿಹಾರ್ ಜೈಲಿಗೆ ಕಳುಹಿಸುವಂತೆ ತಿಹಾರ್ ಜೈಲು ಹಿರಿಯ ಅಧಿಕಾರಿಗಳು ಮನವಿ ಮಾಡಿದ್ದಾರೆ. ಅಲ್ಲದೇ ಮೂರು ದಿನಗಳ ಮುಂಚಿತವಾಗಿ ಅಂದರೆ, ಮಾರ್ಚ್ 17 ರಂದೇ ಪವನ್ ಜಲ್ಲಾಡ್ ತಿಹಾರ್ ಜೈಲಿನಲ್ಲಿ ಹಾಜರಿರುವಂತೆ ಕೇಳಲಾಗಿದೆ ಎಂದು ಡಿಜಿ ಸಂದೀಪ್ ಗೋಯೆಲ್ ಹೇಳಿದ್ದಾರೆ.