ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿನ ಹವಾಮಾನ ವೈಪರಿತ್ಯದಿಂದಾಗಿ ವಿಮಾನ ಹಾಗೂ ರೈಲು ಸೇವೆಗಳಲ್ಲಿ ಭಾರಿ ವ್ಯತ್ಯಯ ಕಂಡುಬಂದಿದೆ.
ದಟ್ಟವಾದ ಮಂಜು ದೆಹಲಿಯನ್ನಾವರಿಸಿದ್ದು, ಗೋಚರತೆ ಕಡಿಮೆಯಾಗಿದ್ದರಿಂದ ಸುಮಾರು 530 ವಿಮಾನಗಳ ಹಾರಾಟದಲ್ಲಿ ವಿಳಂಬವಾಗಿದ್ದು, 21 ವಿಮಾನಗಳ ಮಾರ್ಗ ಬದಲಾಯಿಸಲಾಗಿದೆ. ಅಲ್ಲದೇ 40 ವಿಮಾನಗಳು ರದ್ದಾಗಿದೆ.
ಇನ್ನು 34 ರೈಲುಗಳ ಸೇವೆಯೂ ಕೂಡ ವಿಳಂಬವಾಗಿದೆ. ವಿಳಂಬದ ಅವಧಿ ವ್ಯಾಪ್ತಿ ಒಂದರಿಂದ 15 ಗಂಟೆಗಳಿಷ್ಟಿವೆ. ದೂರದ ಪ್ರಯಾಣದ ರೈಲುಗಳಾದ ಭುವನೇಶ್ವರ್- ಆನಂದ್ ವಿಹಾರ್ ಒಡಿಶಾ ಸಂಪರ್ಕ್ ಕ್ರಾಂತಿ ಎಕ್ಸ್‌ಪ್ರೆಸ್ (12819) ಇಂದು ಬೆಳಗ್ಗೆ 15 ಗಂಟೆ ವಿಳಂಬವಾಗಿದ್ದರೆ, ಪುರಿ- ಆನಂದ್ ವಿಹಾರ್ ನೀಲಾಂಚಲ್ (12875) 13 ಗಂಟೆ ತಡವಾಗಿ ಚಲಿಸುತ್ತಿವೆ. ಇನ್ನು ಲಕ್ನೋ- ದೆಹಲಿ ಗೋಮತಿ ಎಕ್ಸ್‌ಪ್ರೆಸ್ 5 ಗಂಟೆ ವಿಳಂಬವಾಗಿದ್ದು, ಅಮೃತಸರ- ನವದೆಹಲಿ ಇಂಟರ್ಸಿಟಿ ರೈಲು ಒಂದು ಗಂಟೆಗೂ ಹೆಚ್ಚು ಕಾಲ ತಡವಾಗಿದೆ.
0230-1200 ಗಂಟೆಗಳ ಅವಧಿಯಲ್ಲಿ 0-200 ಮೀಟರ್ ಗೋಚರತೆಯೊಂದಿಗೆ ಅತ್ಯಂತ ಕೆಟ್ಟ ಹಾಗೂ ದಟ್ಟವಾದ ಮಂಜಿಗೆ (worst "dense fog") ದೆಹಲಿ ಸಾಕ್ಷಿಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಇನ್ನು ದೆಹಲಿಯ ಲೋದಿಯಲ್ಲಿ 3.7 ಡಿಗ್ರಿ ಸೆಲ್ಸಿಯಸ್, ಅಯಾ ನಗರದಲ್ಲಿ 4.2 ಹಾಗೂ ಪಾಲಮ್ನಲ್ಲಿ 4.1 C ಕನಿಷ್ಠ ತಾಪಮಾನ ದಾಖಲಾಗಿದೆ.
'ತೀವ್ರತೆ' ಕಾಯ್ದಿರಿಸಿಕೊಂಡ ದೆಹಲಿ ವಾಯುಮಾಲಿನ್ಯ:
ಇನ್ನು ದೆಹಲಿಯ ವಾಯುಮಾಲಿನ್ಯ ಮಟ್ಟ ತೀವ್ರವಾಗಿಯೇ ಉಳಿದಿದೆ. ಇಂದಿನ ವಾಯು ಗುಣಮಟ್ಟದ ಸೂಚ್ಯಂಕ (AQI) 431 ಕ್ಕೆ ಕುಸಿದಿದ್ದು, ಹೊರಗಿನ ಚಟುವಟಿಕೆಗಳನ್ನು ಮಾಡದಂತೆ ಜನರಿಗೆ ಸೂಚನೆ ನೀಡಲಾಗಿದೆ.
0-50 ನಡುವಿನ AQI ಅನ್ನು ಉತ್ತಮ, 51-100 ತೃಪ್ತಿಕರ, 101-200 ಮಧ್ಯಮ, 201-300 ಕಳಪೆ, 301-400 ಅತ್ಯಂತ ಕಳಪೆ ಹಾಗೂ 401-500 ಅನ್ನು ತೀವ್ರ ಅಥವಾ ಅಪಾಯಕಾರಿ ಎಂದು ಪರಿಗಣಿಸಲಾಗುತ್ತದೆ. ಇದೀಗ ದೆಹಲಿಯ ವಾಯು ಗುಣಮಟ್ಟದ ಸೂಚ್ಯಂಕ (431) ಅಪಾಯಕಾರಿ ಮಟ್ಟಕ್ಕೆ ಬಂದು ತಲುಪಿದೆ.