ನವದೆಹಲಿ: ಕೋವಿಡ್ ಲಾಕ್ಡೌನ್ ಸಂದರ್ಭದಲ್ಲಿ ಭಾರಿ ಸುಧಾರಣೆ ಕಂಡಿದ್ದ ರಾಷ್ಟ್ರ ರಾಜಧಾನಿ ದೆಹಲಿಯ ವಾಯುಗುಣಮಟ್ಟ ಮತ್ತೆ ಕಳಪೆಯಾಗುತ್ತಿದೆ.
ಇಂದು ಬೆಳಗ್ಗೆ ವೇಳೆಗೆ ದೆಹಲಿಯ ವಾಯು ಗುಣಮಟ್ಟ ಸೂಚ್ಯಂಕ(AQI) ಮಧ್ಯಮ ಪ್ರಮಾಣದಲ್ಲಿತ್ತು. ಇದು ನಾಳೆಯ ವೇಳೆಗೆ ಕಳಪೆ ಗುಣಮಟ್ಟವನ್ನು ತಲುಪಲಿದೆ ಎಂದು ಸರ್ಕಾರಿ ಮುನ್ಸೂಚನಾ ಸಂಸ್ಥೆ ತಿಳಿಸಿದೆ.
ಇಂದು ಬೆಳಗ್ಗೆ 10 ಗಂಟೆ ವೇಳೆಗೆ ವಾಯುಗುಣಮಟ್ಟ ಸೂಚ್ಯಂಕ 150 ಇತ್ತು. ಇದನ್ನು ಮಧ್ಯಮ ಗುಣಮಟ್ಟ ಎಂದು ಪರಿಗಣಿಸಲಾಗುತ್ತದೆ. ಕಳೆದ ಬುಧವಾರದ ಒಟ್ಟಾರೆ AQI 156 ಆಗಿತ್ತು.
ವಾಯುಗುಣಮಟ್ಟ ಸೂಚ್ಯಂಕವು, 0 ಮತ್ತು 50ರ ನಡುವೆ ಇದ್ದರೆ ಅದನ್ನು 'ಉತ್ತಮ' ಎಂದು ಪರಿಗಣಿಸಲಾಗುತ್ತದೆ. 51 ರಿಂದ 100ರ ನಡುವೆ ಇದ್ದರೆ 'ತೃಪ್ತಿಕರ', 101ರಿಂದ 200ರೊಳಗೆ ಇದ್ದರೆ 'ಮಧ್ಯಮ', 201ರಿಂದ 300ರ ನಡುವೆ 'ಕಳಪೆ', 301ರಿಂದ 400ರಲ್ಲಿ ಇದ್ದರೆ 'ಅತಿ ಕಳಪೆ', 401ರಿಂದ 500 ಇದ್ದರೆ 'ಅಪಾಯಕಾರಿ' ಎಂದು ಪರಿಗಣಿಸಲಾಗುತ್ತದೆ.