ನವದೆಹಲಿ:ಕೇಂದ್ರ ಗೃಹ ಸಚಿವರು ಎಲ್ಲಿದ್ದಾರೆ, ಶನಿವಾರ ಹಿಂಸಾಚಾರ ಭುಗಿಲೆದ್ದಾಗಿನಿಂದ ಅವರು ಏನು ಮಾಡುತ್ತಿದ್ದಾರೆ? ಎಂದು ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಪ್ರಶ್ನಿಸಿದ್ದಾರೆ.
ಈಶಾನ್ಯ ದೆಹಲಿಯಲ್ಲಿ ಹಿಂಸಾಚಾರದ ಭುಗಿಲೆದ್ದಿದ್ದರೂ ಮೌನವಾಗಿರುವುದಕ್ಕೆ 'ಕೇಂದ್ರ ಮತ್ತು ದೆಹಲಿ ಸರ್ಕಾರದ ನಾಯಕರ ಮೇಲೆ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅಸಮಾಧಾನ ವ್ಯಕ್ತಪಡಿಸಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದ್ದಾರೆ.
ರಾಷ್ಟ್ರ ರಾಜಧಾನಿಯಲ್ಲಿ ಹಿಂಸಾಚಾರವನ್ನು ನಿಗ್ರಹಿಸಲು ಕೇಂದ್ರ ಮತ್ತು ಅರವಿಂದ್ ಕೇಜ್ರಿವಾಲ್ ನೇತೃತ್ವದ ಸರ್ಕಾರಗಳು ಸಮಯಕ್ಕೆ ಸರಿಯಾಗಿ ಕ್ರಮ ಕೈಗೊಂಡಿಲ್ಲ. ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡುವಲ್ಲಿ ಎರಡೂ ಸರ್ಕಾರಗಳು ವಿಫಲವಾಗಿವೆ. ಎರಡೂ ಸಮಾನ ಜವಾಬ್ದಾರಿ ಹೊಂದಿವೆ ಎಂದು ಸೋನಿಯಾ ಹೇಳಿದ್ದಾರೆ.
ಹಿಂಸಾಚಾರ ಭುಗಿಲೆಳುವ ಮುನ್ನ ಗುಪ್ತಚರ ಇಲಾಖೆಯ ಸ್ಪಷ್ಟ ಮಾಹಿತಿಯ ಕೊರತೆಯನ್ನೂ ಅವರು ಪ್ರಶ್ನಿಸಿದ್ದಾರೆ. 'ಹಿಂಸಾಚಾರ ಭುಗಿಲೆದ್ದಿದೆ ಎಂಬ ಸ್ಪಷ್ಟ ಸೂಚನೆಗಳು ಇದ್ದಾಗ ಭಾನುವಾರ ರಾತ್ರಿ ನಿಯೋಜಿಸಲಾದ ಪೊಲೀಸ್ ಪಡೆಯ ಶಕ್ತಿ ಏನು? ಘಟನೆ ದೆಹಲಿ ಪೊಲೀಸರ ನಿಯಂತ್ರಣ ಮೀರಿದೆ ಎಂದು ಸ್ಪಷ್ಟವಾದಾಗ ಹೆಚ್ಚುವರಿ ಭದ್ರತಾ ಪಡೆಗಳನ್ನು ತಕ್ಷಣವೇ ಏಕೆ ಕರೆಸಲಿಲ್ಲ'? ಎಐಸಿಸಿ ಅಧ್ಯಕ್ಷೆ ಪ್ರಶ್ನಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ಸರ್ವಪಕ್ಷ ಸಭೆ ಕರೆದು ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ಎಲ್ಲರಿಗೂ ತಿಳಿಸಬೇಕು ಎಂದು ಸೋನಿಯಾ ಒತ್ತಾಯಿಸಿದ್ದಾರೆ. 'ಹಿಂದೆ, ವಾಜಪೇಯಿ ಸರ್ಕಾರದ ಅವಧಿಯಲ್ಲಿ ಯಾವುದೇ ರೀತಿಯ ಬಿಕ್ಕಟ್ಟು ಉಂಟಾದಾಗಲೆಲ್ಲಾ ಅವರು ಮೊದಲು ಸರ್ವಪಕ್ಷ ಸಭೆಗೆ ಕರೆಯುತ್ತಿದ್ದರು. ದುರದೃಷ್ಟವಶಾತ್, ಮೋದಿ ಸರ್ಕಾರ ಬಂದಾಗಿನಿಂದ ನನಗೆ ತಿಳಿದ ಮಟ್ಟಿಗೆ ಅಂತಹ ಯಾವುದೇ ಸಭೆಯನ್ನು ಕರೆಯಲಾಗಿಲ್ಲ ಎಂದಿದ್ದಾರೆ.