ನವದೆಹಲಿ:ರಾಷ್ಟ್ರ ರಾಜಧಾನಿಯಲ್ಲಿ ಸೋಂಕಿತರನ್ನು ಪತ್ತೆಹಚ್ಚಲು ಇನ್ನೂ ಹೆಚ್ಚು ಕೋವಿಡ್-19 ಟೆಸ್ಟ್ ಕಿಟ್ಗಳನ್ನು ಪಡೆದುಕೊಳ್ಳಲಿದೆ ಹಾಗೂ ಕೇಂದ್ರ ಸರ್ಕಾರ ಮತ್ತು ದೆಹಲಿ ಸರ್ಕಾರಗಳು ಒಟ್ಟಾಗಿ ಕೊರೊನಾ ನಿಯಂತ್ರಣಕ್ಕೆ ಯೋಜನೆ ರೂಪಿಸಲು ಈ ದಿನದ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಜೊತೆ ಸಭೆ ನಡೆಸಿದ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಹಾಗೂ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಕೊರೊನಾ ವಿರುದ್ಧ ಒಟ್ಟಾಗಿ ಹೋರಾಡುವ ಭರವಸೆ ನೀಡಿದ್ದಾರೆ ಎನ್ನಲಾಗಿದೆ.
ಇದು ಮೊದಲ ಸುತ್ತಿನ ಸಭೆಯಾಗಿದ್ದು, ಸುಮಾರು 75 ನಿಮಿಷಗಳ ಕಾಲ ನಡೆಯಿತು. ಮತ್ತೊಂದು ಸಭೆ ಸಂಜೆ ಐದು ಗಂಟೆಗೆ ನಿಗದಿಯಾಗಿದ್ದು, ಈ ಸಭೆಯಲ್ಲಿ ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲ, ಕೇಂದ್ರ ಆರೋಗ್ಯ ಇಲಾಖೆಯ ಕಾರ್ಯದರ್ಶಿ ಪ್ರೀತಿ ಸೂಡನ್, ಏಮ್ಸ್ನ ನಿರ್ದೇಶಕ ಡಾ. ರಂದೀಪ್ ಗುಲಾರಿಯಾ ಜೊತೆಗೆ ನೀತಿ ಆಯೋಗದ ಸದಸ್ಯರು ಹಾಗೂ ಹಿರಿಯ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ.
ಈಗ ನಡೆದ ಸಭೆಯಲ್ಲಿ ಮೂಲಗಳ ಪ್ರಕಾರ ಸಿಎಂ ಕೇಜ್ರಿವಾಲ್ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ದೆಹಲಿಯಲ್ಲಿ ಕೊರೊನಾ ನಿಯಂತ್ರಣಕ್ಕೆ ತೆಗೆದುಕೊಂಡ ಕ್ರಮಗಳ ಬಗ್ಗೆ ವಿವರಣೆ ನೀಡಿದರು. ಜೊತೆಗೆ ಮುಂದಿನ ದಿನಗಳಲ್ಲಿ ಬೇಕಾಗಿರುವ ಸೌಲಭ್ಯಗಳ ಬಗ್ಗೆಯೂ ಈ ವೇಳೆ ಮನವಿ ಸಲ್ಲಿಸಿದರು.
ಜೂನ್ 10ರಂದು ಅಮಿತ್ ಶಾ ಹಾಗೂ ಸಿಎಂ ಅರವಿಂದ್ ಕೇಜ್ರಿವಾಲ್ ಸಭೆ ನಡೆಸಿ ಕೊರೊನಾ ಕುರಿತು ಚರ್ಚೆ ನಡೆಸಿದ್ದರು. ಈಗ ಮತ್ತೊಮ್ಮೆ ಸಭೆ ನಡೆಸಿ ದೆಹಲಿಯಲ್ಲಿ ಕೊರೊನಾ ಕುರಿತು ಚರ್ಚಿಸಿ ಕೊರೊನಾ ವಿರುದ್ಧ ಕೇಂದ್ರ ಹಾಗೂ ದೆಹಲಿ ಸರ್ಕಾರ ಒಟ್ಟಾಗಿ ಸೆಣಸುವ ನಿರ್ಧಾರಕ್ಕೆ ಬಂದಿದ್ದಾರೆ.