ನವದೆಹಲಿ:ಜೀವನದಲ್ಲಿ ಹಿಂದೆಂದೂ ಕಂಡರಿಯದ ರೀತಿಯ ಸುದೀರ್ಘ ಲಾಕ್ ಡೌನ್ನಿಂದಾಗಿ ಗೃಹ ಬಂಧಿಗಳಾಗಿದ್ದಾರೆ ದೇಶದ ಜನ. ದಿನೇ ದಿನೇ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ, ನಾವು ಮೊದಲಿನಂತೆ ಸಹಜ ಜೀವನಕ್ಕೆ ಮರಳುತ್ತೇವೆ ಅನ್ನುವ ಭರವಸೆಯೇ ಜನರಲ್ಲಿ ಇಲ್ಲದಂತಾಗಿದೆ.
ದೇಶಾದ್ಯಂತ ಜನರು ವಿವಿಧ ರೀತಿಯಲ್ಲಿ ಲಾಕ್ ಡೌನ್ಗೆ ಒಳಗಾಗಿದ್ದಾರೆ. ಕೆಲವರು ವಿದೇಶಗಳಲ್ಲಿ, ಹೊರ ರಾಜ್ಯಗಳಲ್ಲಿದ್ದರೆ, ಕೆಲವರು ಕೆಲಸದ ಸ್ಥಳದಲ್ಲಿ ಇನ್ನೂ ಕೆಲವರು ಸ್ವಂತ ಮನೆಯಲ್ಲಿ ಬಂಧನಕ್ಕೊಳಗಾಗಿದ್ದಾರೆ. ಆದ್ರೆ, ರಾಷ್ಟ್ರ ರಾಜಧಾನಿಯ ಈಶಾನ್ಯ ಭಾಗದ ಸೀಲಾಂಪುರದಲ್ಲಿ ವ್ಯಕ್ತಿಯೊಬ್ಬ ಇವೆಲ್ಲಕ್ಕಿಂತ ವಿಭಿನ್ನವಾಗಿ ಎಲ್ಲರನ್ನು ಹುಬ್ಬೇರಿಸುವಂತೆ ಕಳೆದ 50 ದಿನಗಳಿಂದ ಕಾರಿನೊಳಗೇ ಜೀವನ ಸಾಗಿಸುತ್ತಿದ್ದಾನೆ.
50 ದಿನಗಳಿಂದ ಕಾರಿನೊಳಗೆ ವಾಸಿಸುತ್ತಿದ್ದಾನೆ ರಾಜಧಾನಿಯ ಈ ವ್ಯಕ್ತಿ.. ಹೌದು, ಉತ್ತರ ಪ್ರದೇಶದ ಬಿಜ್ನೋರ್ ಮೂಲದ ಶಹನವಾಝ್ ಎಂಬ ವ್ಯಕ್ತಿ ತನ್ನ ಸೋದರ ಮಾವನ ಮನೆಯಲ್ಲಿ ವಾಸಿಸುತ್ತಿದ್ದ. ಯಾವುದೋ ವೈಯುಕ್ತಿಕ ವಿಷಯಕ್ಕೆ ಜಗಳ ನಡೆದು ಸೋದರಮಾವನು ಶಹನವಾಝ್ನನ್ನು ಮನೆಯಿಂದ ಹೊರ ಹಾಕಿದ್ದ. ಈ ವೇಳೆ ಎಲ್ಲಿ ಹೋಗಬೇಕೆಂದು ದಾರಿ ಕಾಣದ ಶಹನವಾಝ್ ಕೆಲ ಸಂಬಂಧಿಕರ ಮನೆಗೂ ಆಶ್ರಯ ಕೇಳಿಕೊಂಡು ಅಲೆದಾಡಿದ್ದ. ಆದರೆ, ಕೊರೊನಾ ಭೀತಿ ಹಿನ್ನೆಲೆ ಯಾರೂ ಈತನನ್ನು ಮನೆಗೆ ಸೇರಿಸಿಕೊಳ್ಳಲು ಸಿದ್ಧವಿರಲಿಲ್ಲ. ಹೀಗಾಗಿ ಬೇರೆ ದಾರಿ ಕಾಣದ ಶಹನವಾಝ್, ದೆಹಲಿಯ ಸೀಲಾಂಪುರ ಬಳಿ ತನ್ನ ಕಾರನ್ನು ನಿಲ್ಲಿಸಿ ಕಳೆದ 50 ದಿನಗಳಿಂದ ಅದರೊಳಗೇ ವಾಸಿಸುತ್ತಿದ್ದಾನೆ. ವಾಹನ ಸಂಚಾರಕ್ಕೆ ಅನುಮತಿ ಇಲ್ಲದ ಹಿನ್ನೆಲೆ ಈತನಿಗೆ ಮನೆಗೂ ತೆರಳಲು ಸಾಧ್ಯವಾಗಿಲ್ಲ.
ಸದ್ಯ ರಂಜಾನ್ ತಿಂಗಳು ಆಗಿರುವುದರಿಂದ ಶಹನವಾಝ್ ಉಪವಾಸ ವ್ರತವನ್ನು ಕೈಗೊಳ್ಳುತ್ತಿದ್ದು, ಇಫ್ತಾರ್ ಮತ್ತು ಸಹರಿಗೆ ಆಹಾರವನ್ನು ಸ್ಥಳೀಯ ನಿವಾಸಿಗಳು ಒದಗಿಸುತ್ತಿದ್ದಾರೆ. ಆದಷ್ಟು ಬೇಗ ಲಾಕ್ಡೌನ್ ಮುಗಿಯಬಹುದು ಎಂಬ ನಿರೀಕ್ಷೆಯಲ್ಲಿರುವ ಶಹನವಾಝ್, ಮುಂದಿನ ವಾರ ನಡೆಯಲಿರುವ ಈದಉಲ್ ಫಿತರ್ (ರಂಜಾನ್ ಹಬ್ಬ) ಗಾದರೂ ತನ್ನ ಹೆತ್ತವರ ಬಳಿ ಸೇರಬೇಕೆಂಬ ಬಯಕೆಯಲ್ಲಿದ್ದಾನೆ.