ನವದೆಹಲಿ: ವಾರದ ಹಿಂದೆ ಆರಂಭವಾದ ಕೋಮು ಹಿಂಸಾಚಾರದಿಂದ ತತ್ತರಿಸಿದ್ದ ಈಶಾನ್ಯ ದೆಹಲಿ ಸಹಜ ಸ್ಥಿತಿಗೆ ಮರಳಿದ್ದು, ಜನರು ತಮ್ಮ ದೈನಂದಿನ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.
ಮುನ್ನೆಚ್ಚರಿಕಾ ಕ್ರಮವಾಗಿ ಭದ್ರತಾ ಸಿಬ್ಬಂದಿ ಗಸ್ತು ತಿರುಗುತ್ತಿದ್ದು ಅಂಗಡಿ ಮುಂಗಟ್ಟುಗಳು ಬಾಗಿಲು ತೆರೆದಿವೆ. ಎಂದಿನಂತೆ ಜನರು ತಮ್ಮ ದಿನನಿತ್ಯದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ದೃಶ್ಯಗಳು ಕಂಡುಬಂತು.
ಸಹಜ ಸ್ಥಿತಿಗೆ ಮರಳಿದ ಈಶಾನ್ಯ ದೆಹಲಿ ಭೀಕರ ಹಿಂಸಾಚಾರ ಪೀಡಿತ ಪ್ರದೇಶಗಳಾಗಿದ್ದ ಜಾಫ್ರಾಬಾದ್, ಮೌಜ್ಪುರ್, ಬಾಬರ್ಪುರ ಮತ್ತು ಸೀಲಾಂಪುರ್ ಪ್ರದೇಶಗಲ್ಲಿ ಇನ್ನೂ ಕೂಡ ಭದ್ರತಾ ಸಿಬ್ಬಂದಿ ಬೀಡು ಬಿಟ್ಟಿದ್ದು ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಿದ್ದಾರೆ. ಈ ಪ್ರದೇಶಗಳಲ್ಲಿ ವಾಹನ ಸಂಚಾರ ಕೂಡ ಎಂದಿನಂತೆ ಕಂಡುಬಂದಿದ್ದು ಬಸ್, ಆಟೋ, ಸೈಕಲ್ ರಿಕ್ಷಾಗಳು ರಸ್ತೆಗಿಳಿದಿವೆ.
ಸಣ್ಣ ಪುಟ್ಟ ಅಂಗಡಿಗಳು ಮಾತ್ರ ಬಾಗಿಲು ತೆರೆದಿದ್ದು, ದೊಡ್ಡ ಅಂಗಡಿಗಳು, ಶೋರೂಂಗಳು ಇನ್ನೂ ಕೂಡ ಕಾರ್ಯ ಆರಂಭಿಸಿಲ್ಲ ಎಂದು ವ್ಯಕ್ತಿಯೋರ್ವ ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದ್ದಾನೆ.
ಕಳೆದ ವಾರ ಭುಗಿಲೆದ್ದಿದ್ದ ಹಿಂಸಾಚಾರಕ್ಕೆ 42 ಜನ ಸಾವಿಗೀಡಾಗಿದ್ದು, 200ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. ಇಲ್ಲಿಯವರೆಗೆ ಒಟ್ಟು 167 ಎಫ್‌ಐಆರ್ ದಾಖಲಾಗಿದ್ದು, ಪೊಲೀಸರು 885 ಜನರನ್ನು ವಶಕ್ಕೆ ಪಡೆದಿದ್ದಾರೆ.