ನವದೆಹಲಿ: ಕಳೆದ ಬಾರಿ ಲೋಕಸಭೆ ಚುನಾವಣೆಯಲ್ಲಿ ಮೋದಿ ಸಂಪುಟದಲ್ಲಿ ಮಹತ್ವದ ಖಾತೆಗಳನ್ನು ನಿರ್ವಹಿಸಿದ ರಾಜನಾಥ್ ಸಿಂಗ್ ಹಾಗೂ ನಿತಿನ್ ಗಡ್ಕರಿ ಈ ಬಾರಿ ಮತ್ತೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಇನ್ನು ಬಿಜೆಪಿ ವಲಯದಲ್ಲಿ ಚಾಣಕ್ಯ ಎಂದು ಕರೆಸಿಕೊಳ್ಳುವ ಅಮಿತ್ ಶಾ ಸಹ ಇಂದೇ ಸಚಿವರಾಗಿ ಪದಗ್ರಹಣ ಮಾಡಿದರು.
ಪ್ರಧಾನಿ ಮೋದಿ ಅವರೊಂದಿಗೆಯೆ ಬಿಜೆಪಿಯ ಪ್ರಭಾವಿ ನಾಯಕರು ಎಂದು ಗುರುತಿಸಿಕೊಂಡ ರಾಜನಾಥ್ ಸಿಂಗ್ ಮಹತ್ವದ ಗೃಹ ಖಾತೆಯನ್ನು ಹಾಗೂ ನಿತಿನ್ ಗಡ್ಕರಿ ಸಾರಿಗೆ ಇಲಾಖೆಯ ಜವಾಬ್ದಾರಿ ನಿಭಾಯಿಸಿದ್ದರು. ಬಿಜೆಪಿ ಅಧ್ಯಕ್ಷರಾಗಿ , ದೇಶದಲ್ಲಿ ಪಕ್ಷ ಅತಿಹೆಚ್ಚು ಸ್ಥಾನಗಳನ್ನು ಜಯಿಸಲು ರಣತಂತ್ರ ರೂಪಿಸಿ, ಯಶಸ್ಸು ಕಂಡ ಅಮಿತ್ ಶಾ ಸಂಪುಟದಲ್ಲಿ ಕಾಣಿಸಿಕೊಂಡಿದ್ದಾರೆ.
ರಾಜನಾಥ್ಸಿಂಗ್
ಉತ್ತರಪ್ರದೇಶದ ಸಿಎಂ ಆಗಿ, ವಾಜಪೇಯಿ ಸರ್ಕಾರದಲ್ಲಿ ಸಚಿವರಾಗಿ ಸೇವೆ ಮಾಡಿದ ರಾಜನಾಥ್ ಸಿಂಗ್ ಕಳೆದ ಬಾರಿ ಗೃಹ ಸಚಿವರಾಗಿ ಅತ್ಯಂತ ಜವಾಬ್ದಾರಿಯುತ ಕೆಲಸ ನಿಭಾಯಿಸಿದರು. ಎರಡು ಬಾರಿ ಬಿಜೆಪಿ ಅಧ್ಯಕ್ಷರೂ ಆಗಿದ್ದ ಇವರು, ಆರ್ಎಸ್ಎಸ್ ಕಟ್ಟಾಳು ಎಂದೇ ಪ್ರಸಿದ್ಧರು.
ಮಿರ್ಜಾಪುರದ ಶಾಸಕರಾಗಿ ಆರಂಭವಾದ ಇವರ ರಾಜಕೀಯ ಜೀವನ, ರಾಜ್ಯ ಶಿಕ್ಷಣ ಖಾತೆ, ರಾಜ್ಯಸಭೆಯಲ್ಲಿ ಸ್ಥಾನ, ಉತ್ತರಪ್ರದೇಶದ ಸಿಎಂ, ಕೇಂದ್ರ ಕೃಷಿ ಖಾತೆ, 2014ರಲ್ಲಿ ಕೇಂದ್ರ ಗೃಹ ಖಾತೆವರೆಗೆ ಸಾಗಿಬಂದಿದೆ. ಲಖನೌ ಕ್ಷೇತ್ರದಿಂದಲೇ ಮತ್ತೆ ವಿಜಯ ಸಾಧಿಸಿರುವ ರಾಜನಾಥ್ ಸಿಂಗ್ ಅವರಿಗೆ ಇದೀಗ ಮತ್ತೆ ಸಚಿವರಾಗುವ ಭಾಗ್ಯ ಒಲಿದು ಬಂದಿದೆ. ಇವರು ಮೋದಿ ಸಂಪುಟದ ನಂಬರ್ ಒನ್ ಸ್ಥಾನದಲ್ಲಿದ್ದಾರೆ. ಈ ಬಾರಿಯೂ ರಾಜನಾಥ್ ಸಿಂಗ್ಗೆ ಅಗ್ರಸ್ಥಾನ ನೀಡಲಾಗಿದೆ.