ನವದೆಹಲಿ: 10 ಸಾವಿರ ಹಾಸಿಗೆಗಳ ಸಾಮರ್ಥ್ಯ ಹೊಂದಿರುವ ವಿಶ್ವದ ಅತಿದೊಡ್ಡ ಕೋವಿಡ್ ಆಸ್ಪತ್ರೆ ರಾಷ್ಟ್ರ ರಾಜಧಾನಿಯಲ್ಲಿ ಸ್ಥಾಪನೆಯಾಗಿದ್ದು, ದೆಹಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಇಂದು ಉದ್ಘಾಟಿಸಿದರು.
ದೆಹಲಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಆಸ್ಪತ್ರೆಗಳಲ್ಲಿ ರೋಗಿಗಳನ್ನು ದಾಖಲಿಸಲು ಬೆಡ್ಗಳ ಕೊರತೆ ಉಂಟಾಗಿತ್ತು. ಅಲ್ಲದೇ ಮನೆಗಳಲ್ಲೇ ಐಸೊಲೇಷನ್ ವಾರ್ಡ್ಗಳಾಗಿ ಮಾಡುವ ಪರಿಸ್ಥಿತಿ ಬಂದೊದಗಿತ್ತು. ಈ ಕೊರತೆ ನೀಗಿಸಲು ಕೇಂದ್ರ ಗೃಹ ಸಚಿವಾಲಯದ ಸಹಾಯದೊಂದಿಗೆ ನೂತನ 'ಸರ್ದಾರ್ ವಲ್ಲಭಭಾಯಿ ಪಟೇಲ್ ಕೋವಿಡ್ ಆಸ್ಪತ್ರೆ' ಸ್ಥಾಪಿಸಲಾಗಿದೆ.
ವಿಶ್ವದಲ್ಲೇ ಅತಿದೊಡ್ಡ ಕೋವಿಡ್ ಆಸ್ಪತ್ರೆ:
ದೆಹಲಿ-ಹರಿಯಾಣ ಗಡಿ ಸಮೀಪವಿರುವ ಚಟ್ಟರ್‌ಪುರ ಪ್ರದೇಶದಲ್ಲಿರುವ ರಾಧಾ ಸೋಮಿ ಸತ್ಸಂಗ್ ಬಿಯಾಸ್ ಆವರಣದಲ್ಲಿ ನಿರ್ಮಿಸಲಾಗಿರುವ ಪ್ರಪಂಚದಲ್ಲೇ ಅತಿದೊಡ್ಡ ಕೋವಿಡ್ ಕೇಂದ್ರ ಇದಾಗಿದೆ. ಈ ಕೇಂದ್ರವು 1,700 ಅಡಿ ಉದ್ದ, 700 ಅಡಿ ಅಗಲ ವಿಸ್ತೀರ್ಣವಿದೆ. 200 ಕೊಠಡಿಗಳನ್ನು ಹೊಂದಿದ್ದು, ತಲಾ 50 ಹಾಸಿಗೆಗಳಿವೆ.