ನವ ದೆಹಲಿ:ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ನಾಲ್ವರು ಅಪರಾಧಿಗಳ ಮರಣದಂಡನೆಯನ್ನು ತಡೆಹಿಡಿದ ಪಟಿಯಾಲ ಹೌಸ್ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ, ಕೇಂದ್ರ ಸರ್ಕಾರ ಮತ್ತು ತಿಹಾರ್ ಜೈಲು ಅಧಿಕಾರಿಗಳು ಸಲ್ಲಿಸಿದ್ದ ಮನವಿಯ ಕುರಿತು ದೆಹಲಿ ಹೈಕೋರ್ಟ್ ಇಂದು ತನ್ನ ಆದೇಶ ನೀಡಲಿದೆ.
ನ್ಯಾಯಮೂರ್ತಿ ಸುರೇಶ್ ಕುಮಾರ್ ಕೈಟ್ ಅವರ ಏಕ-ನ್ಯಾಯಾಧೀಶ ಪೀಠವು ಭಾನುವಾರದಂದು ಎಲ್ಲಾ ಪಕ್ಷಗಳ ವಾದಗಳನ್ನು ಆಲಿಸಿದ ನಂತರ ತನ್ನ ಆದೇಶವನ್ನು ಇಂದಿಗೆ ಕಾಯ್ದಿರಿಸಿತ್ತು.
ಭಾನುವಾರ ನಡೆದ ವಿಚಾರಣೆಯ ವೇಳೆ, ಅಪರಾಧಿಗಳ ಪರ ವಕೀಲ ಎಪಿ ಸಿಂಗ್, "ಈ ಪ್ರಕರಣದಲ್ಲಿ ಮರಣದಂಡನೆ ಶಿಕ್ಷೆ ವಿಧಿಸಲು ಅವಸರ ಏನಿತ್ತು? ಅವಸರದಿಂದ ನೀಡಿದ ನ್ಯಾಯವು ಸಮಾಧಿಯಾದ ನ್ಯಾಯದಂತೆ" ಎಂದು ತಮ್ಮ ವಾದ ಮಂಡನೆ ಮಾಡಿದ್ದರು.
ಕೇಂದ್ರದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಅಪರಾಧಿಗಳು ಉದ್ದೇಶಪೂರ್ವಕವಾಗಿ ಮರಣದಂಡನೆಯನ್ನು ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು.
ಅಕ್ಷಯ್ ಠಾಕೂರ್, ಮುಖೇಶ್ ಸಿಂಗ್, ಪವನ್ ಗುಪ್ತಾ ಮತ್ತು ವಿನಯ್ ಶರ್ಮಾ ಎಂಬ ನಾಲ್ವರು ಅಪರಾಧಿಗಳಿಗೆ ಫೆಬ್ರವರಿ 1ರಂದು ವಿಧಸಬೇಕಿದ್ದ ಮರಣ ದಂಡನೆ ಶಿಕ್ಷೆಯನ್ನು ಮುಂದಿನ ಆದೇಶ ನೀಡುವವರೆಗೂ ಕೋರ್ಟ್ ತಡೆಹಿಡಿದಿತ್ತು.