ಕರ್ನಾಟಕ

karnataka

ETV Bharat / bharat

ಜಾಮಿಯಾ ಹಿಂಸಾಚಾರ ಪ್ರಕರಣ: ಜುಲೈ 6ಕ್ಕೆ ವಿಚಾರಣೆ ಮುಂದೂಡಿಕೆ - ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯ

ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಕಳೆದ ವರ್ಷ ಡಿಸೆಂಬರ್‌ನಲ್ಲಿ ಜಾಮಿಯಾ ವಿವಿಯಲ್ಲಿ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತ್ತು. ಪ್ರಕರಣ ಸಂಬಂಧ ವಿಚಾರಣೆಯನ್ನು ದೆಹಲಿ ಹೈಕೋರ್ಟ್ ಜುಲೈ 6ಕ್ಕೆ ಮುಂದೂಡಿದೆ.

Jamia violence case
ಜಾಮಿಯಾ ಹಿಂಸಾಚಾರ ಪ್ರಕರಣ

By

Published : Jun 29, 2020, 4:14 PM IST

ನವದೆಹಲಿ:ಕಳೆದ ವರ್ಷ ಡಿಸೆಂಬರ್‌ನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ (ಜೆಎಂಐ) ಆವರಣ ಹಾಗೂ ಸುತ್ತಮುತ್ತ ನಡೆದ ಹಿಂಸಾಚಾರ ಪ್ರಕರಣದ ವಿಚಾರಣೆಯನ್ನು ದೆಹಲಿ ಹೈಕೋರ್ಟ್ ಜುಲೈ 6ಕ್ಕೆ ಮುಂದೂಡಿದೆ.

ಕೊರೊನಾ ಬಿಕ್ಕಟ್ಟಿನಿಂದಾಗಿ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಅರ್ಜಿಗಳ ವಿಚಾರಣೆ ನಡೆಸುತ್ತಿರುವ ಮುಖ್ಯ ನ್ಯಾಯಮೂರ್ತಿ ಡಿ.ಎನ್. ಪಟೇಲ್ ಮತ್ತು ನ್ಯಾಯಮೂರ್ತಿ ಪ್ರತೀಕ್ ಜಲನ್ ನೇತೃತ್ವದ ನ್ಯಾಯಪೀಠವು ಜಾಮಿಯಾ ಹಿಂಸಾಚಾರ ಪ್ರಕರಣದ ವಿಚಾರಣೆಯನ್ನು ಮುಂದೂಡಿಕೆ ಮಾಡಿದೆ.

ಜೆಎಂಐ ವಿದ್ಯಾರ್ಥಿಗಳು ಮತ್ತು ಜಾಮಿಯಾ ನಿವಾಸಿಗಳ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿದ ಆರೋಪದ ಮೇಲೆ ಪೊಲೀಸರ ವಿರುದ್ಧ ಕ್ರಮಕೈಗೊಳ್ಳುವಂತೆ ನಬಿಲಾ ಹಸನ್ ಎಂಬವರು ಅರ್ಜಿ ಸಲ್ಲಿಸಿದ್ದರು. ಇಂದು ನಡೆದ ವಿಚಾರಣೆಯಲ್ಲಿ ದೆಹಲಿ ಪೊಲೀಸ್​ ಪರ ವಕೀಲರಾದ ಅಮಿತ್ ಮಹಾಜನ್ ಮತ್ತು ರಜತ್ ನಾಯರ್ ಈ ಆರೋಪವನ್ನು ತಳ್ಳಿಹಾಕಿ ವಾದ ಮಂಡಿಸಿದ್ದಾರೆ. ಅಲ್ಲದೇ ಪೊಲೀಸ್ ದೌರ್ಜನ್ಯದ ವಿರುದ್ಧ ದಾಖಲಾಗಿರುವ ಎಫ್ಐಆರ್ ಮತ್ತು ನಿರ್ದೇಶನಗಳನ್ನು ರದ್ದುಗೊಳಿಸುವಂತೆ ಕೋರಿ ಅಫಿಡವಿಟ್​ ಸಲ್ಲಿಸಿದ್ದಾರೆ. ಹೀಗಾಗಿ ವಿಚಾರಣೆ ಮುಂದೂಡಿಕೆಯಾಗಿದೆ.

ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ದೇಶದ ವಿವಿಧ ಭಾಗಗಳಲ್ಲಿ ವ್ಯಾಪಕ ಪ್ರತಿಭಟನೆ ನಡೆದಿತ್ತು. ಕಳೆದ ವರ್ಷ ಡಿ.15 ರಂದು ಜಾಮಿಯಾ ವಿವಿಯಲ್ಲಿ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತ್ತು. ಗಲಭೆ ನಿಯಂತ್ರಿಸಲು ಪ್ರತಿಭಟನಾಕಾರರ ಮೇಲೆ ದೆಹಲಿ ಪೊಲೀಸರು ಲಾಠಿ ಪ್ರಹಾರ ನಡೆಸಿ, ಅಶ್ರುವಾಯು ಸಿಡಿಸಿದ್ದರು.

ABOUT THE AUTHOR

...view details