ನವದೆಹಲಿ:ಶಾಪಿಂಗ್ ಮಾಲ್‌ಗಳಲ್ಲಿರುವ 37 ಮದ್ಯದಂಗಡಿಗಳನ್ನು ಮತ್ತೆ ತೆರೆಯಲು ದೆಹಲಿ ಸರ್ಕಾರ ಅನುಮತಿ ನೀಡಿದೆ. ಮಳಿಗೆಗಳಲ್ಲಿ ಸಾಮಾಜಿಕ ಅಂತರದ ಜೊತೆಗೆ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವಂತೆ ಸೂಚಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಗರದಲ್ಲಿ ಸುಮಾರು 240 ಕಂಟೈನ್ಮೆಂಟ್ ಝೋನ್ಗಳಿದ್ದು, ಅಲ್ಲಿ ಮದ್ಯದಂಗಡಿಗಳನ್ನು ಪುನಃ ತೆರೆಯಲು ಅನುಮತಿ ನೀಡಿಲ್ಲ ಎಂದು ಅವರು ತಿಳಿಸಿದ್ದಾರೆ.
ಮಾಲ್ಗಳ ಮಾಲೀಕರು ಸ್ಥಳೀಯ ಆಡಳಿತದ ಸಮನ್ವಯದೊಂದಿಗೆ ಸಾಮಾಜಿಕ ಅಂತರವನ್ನು ಪಾಲಿಸುವುದು ಸೇರಿದಂತೆ ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸರ್ಕಾರ ನಿರ್ದೇಶನ ನೀಡಿದೆ.
ಸರ್ಕಾರವು ಜೂನ್ 8ರಂದು ಮಾಲ್‌ಗಳಲ್ಲಿನ ಮದ್ಯದಂಗಡಿಗಳನ್ನು ಮತ್ತೆ ತೆರೆಯಲು ಅನುಮತಿ ನೀಡಿತ್ತು. ಮಾಸಿಕ ಸ್ಟಾಕ್ ದಾಖಲೆಗಳನ್ನು ಸಲ್ಲಿಸಿದ ನಂತರ ತಮ್ಮ ಕಾರ್ಯಾಚರಣೆ ಪ್ರಾರಂಭಿಸಲು ನಿರ್ದೇಶನ ನೀಡಲಾಗಿತ್ತು.
ದೆಹಲಿಯ ಮಾಲ್ಗಳಲ್ಲಿ ಸುಮಾರು 860 ಮದ್ಯದಂಗಡಿಗಳಿದ್ದು, 475 ಸರ್ಕಾರಿ ಮತ್ತು 389 ಖಾಸಗಿ ವ್ಯಕ್ತಿಗಳ ಒಡೆತನದಲ್ಲಿವೆ. ದೆಹಲಿ ರಾಜ್ಯ ಕೈಗಾರಿಕಾ ಮತ್ತು ಮೂಲ ಸೌಕರ್ಯ ಅಭಿವೃದ್ಧಿ ನಿಗಮ, ದೆಹಲಿ ಪ್ರವಾಸೋದ್ಯಮ ಮತ್ತು ಸಾರಿಗೆ ಅಭಿವೃದ್ಧಿ ನಿಗಮ, ದೆಹಲಿ ರಾಜ್ಯ ನಾಗರಿಕ ಸರಬರಾಜು ನಿಗಮ ಮತ್ತು ದೆಹಲಿ ಗ್ರಾಹಕರ ಸಹಕಾರಿ ಸಗಟು ಅಂಗಡಿ ಎಂಬ ನಾಲ್ಕು ಸರ್ಕಾರಿ ಸಂಸ್ಥೆಗಳು ರಾಷ್ಟ್ರ ರಾಜಧಾನಿಯಲ್ಲಿ ಸರ್ಕಾರಿ ಮದ್ಯದಂಗಡಿಗಳನ್ನು ನಿರ್ವಹಿಸುತ್ತಿವೆ.