ನವದೆಹಲಿ:2020ರ ಗಣರಾಜ್ಯೋತ್ಸವ ಸಂಭ್ರಮಕ್ಕೆ ದಿನಗಣನೆ ಆರಂಭವಾಗಿದ್ದು, ರಾಜಧಾನಿಯ ರಾಜಪಥದಲ್ಲಿ ಅಂತಿಮ ಹಂತದ ಪೂರ್ವಾಭ್ಯಾಸ ಭರದಿಂದ ಸಾಗಿದೆ.
71ನೇ ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಸೇನೆ ಮತ್ತು ವಿವಿಧ ಪೊಲೀಸ್ ತುಕಡಿಗಳ ಪಥಸಂಚಲನ, ವಿವಿಧ ರೀತಿಯ ಆಕರ್ಷಕ ಟ್ಯಾಬ್ಲೋಗಳು, ದೇಶದ ಭದ್ರತೆಗಾಗಿರುವ ಕ್ಷಿಪಣಿಗಳು, ಸಮರ ಟ್ಯಾಂಕರ್ಗಳು ಹಾಗು ವೈಮಾನಿಕ ಪ್ರದರ್ಶನದ ಪೂರ್ವಾಭ್ಯಾಸ ನವದೆಹಲಿಯ ವಿಜಯ್ ಚೌಕ್ನಿಂದ ಕೆಂಪು ಕೋಟೆವರೆಗೆ ನಡೆಯಿತು.
ರಾಜಪಥದಲ್ಲಿ ಸೇನಾ ಪಡೆಗಳಿಂದ ಭರ್ಜರಿ ತಾಲೀಮು ಪೂರ್ವಾಭ್ಯಾಸದ ನಿಮಿತ್ತ ವಿಜಯ್ ಚೌಕ್ನಿಂದ ಇಂಡಿಯಾ ಗೇಟ್ ವರೆಗೆ ಎಲ್ಲಾ ರಸ್ತೆಗಳನ್ನು ಬಂದ್ ಮಾಡಲಾಗಿದೆ. ಹೀಗಾಗಿ, ದೆಹಲಿಯ ಕೇಂದ್ರ ಭಾಗದ ಹಲವು ಪ್ರದೇಶಗಳಲ್ಲಿ ಭಾರಿ ಟ್ರಾಫಿಕ್ ಜಾಮ್ ಉಂಟಾಗಿದ್ದು, ವಾಹನ ಸವಾರರು ಕೆಲಕಾಲ ಪರದಾಡಿದ್ದಾರೆ.
ಈ ವರ್ಷದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಬ್ರೆಜಿಲ್ ಅಧ್ಯಕ್ಷ ಜೈರ್ ಮೆಸ್ಸಿಯಾಸ್ ಬೋಲ್ಸನಾರೊ ಅವರನ್ನು ಪ್ರಧಾನಿ ಮೋದಿ ಆಹ್ವಾನಿಸಿದ್ದು, ನಾಳೆ ಭಾರತಕ್ಕೆ ಆಗಮಿಸಲಿದ್ದಾರೆ.