ನವದೆಹಲಿ:2012ರ ದೆಹಲಿಯಲ್ಲಿ ಅತ್ಯಂತ ಅಮಾನವೀಯ ರೀತಿಯಲ್ಲಿ ನಡೆದ ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಮರಣದಂಡನೆ ಶಿಕ್ಷೆಗೊಳಗಾದ ನಾಲ್ವರು ಅಪರಾಧಿಗಳ ವಿರುದ್ಧ ದೆಹಲಿ ನ್ಯಾಯಾಲಯ ಡೆತ್ ವಾರಂಟ್ ಜಾರಿಗೊಳಿಸಿದೆ.
ಜನವರಿ 22ರಂದು ಬೆಳಿಗ್ಗೆ 7 ಗಂಟೆಗೆ ಅತ್ಯಾಚಾರಿಗಳನ್ನು ಗಲ್ಲಿಗೆ ಹಾಕುವಂತೆ ನ್ಯಾಯಾಲಯ ಮಹತ್ವದ ಆದೇಶ ಹೊರಡಿಸಿದೆ. ಈ ಆದೇಶ ಹೊರ ಬೀಳುತ್ತಿದ್ದಂತೆ ಸಂತ್ರಸ್ತೆಯ ಪೋಷಕರೂ ಸೇರಿದಂತೆ ದೇಶಾದ್ಯಂತ ತೀರ್ಪಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ಅಪರಾಧಿಗಳಾದ ಪವನ್ ಕುಮಾರ್ ಗುಪ್ತಾ, ಅಕ್ಷಯ್, ವಿನಯ್, ಮತ್ತು ಮುಖೇಶ್ ಗಲ್ಲು ಶಿಕ್ಷೆಗೆ ಗುರಿಯಾಗಿದ್ದಾರೆ. ಪ್ರಕರಣದ ಅಪರಾಧಿಗಳ ವಿರುದ್ಧ ಡೆತ್ ವಾರೆಂಟ್ ಹೊರಡಿಸಬೇಕು ಎಂದು ನಿರ್ಭಯಾ ಪೋಷಕರು ಮನವಿ ಸಲ್ಲಿಸಿದ್ದರು. ಇವತ್ತು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಸತೀಶ್ಕುಮಾರ್ ಅರೋರಾ ಅವರು ಆದೇಶ ಪ್ರಕಟಿಸಿದರು.
ಮರಣ ದಂಡನೆಗೆ ಈ ಮೊದಲೇ ಸಿದ್ದತೆ ನಡೆದಿತ್ತು?
ನಿರ್ಭಯಾ ಅತ್ಯಾಚಾರಿಗಳಿಗೆ ಶೀಘ್ರದಲ್ಲೇ ಗಲ್ಲುಶಿಕ್ಷೆ ವಿಧಿಸುವ ಸುದ್ದಿ ಈ ಮೊದಲೇ ಹರಿದಾಡುತ್ತಿತ್ತು. ಆದರೆ, ಈ ಬಗ್ಗೆ ಇನ್ನೂ ಅಧಿಕೃತವಾಗಿ ದಿನಾಂಕ ಪ್ರಕಟವಾಗಿರಲಿಲ್ಲ. ಈ ಎಲ್ಲದರ ನಡುವೆಯೇ ಗಲ್ಲಿಗೇರಿಸಲು ಇಬ್ಬರು ಸಿಬ್ಬಂದಿಯನ್ನು ಒದಗಿಸಬೇಕೆಂದು ಎಂದು ಉತ್ತರ ಪ್ರದೇಶ ಪೊಲೀಸರಿಗೆ ತಿಹಾರ್ ಜೈಲಿನಿಂದ ಮನವಿ ಹೋಗಿತ್ತು.
ಗಲ್ಲಿಗೇರಿಸಲು ತಿಹಾರ್ ಜೈಲಿನಲ್ಲಿ ನೂತನವಾದ ಗಲ್ಲುಕಂಬ ಸಿದ್ಧತೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ನಾಲ್ವರು ಅಪರಾಧಿಗಳನ್ನು ಒಟ್ಟಿಗೆ ಗಲ್ಲಿಗೇರಿಸುವ ಸಲುವಾಗಿ ಈ ಗಲ್ಲುಕಂಬ ಸಿದ್ಧಪಡಿಸಲಾಗಿದೆ ಎಂದು ಹೇಳಲಾಗುತ್ತಿದೆ. ನಾಲ್ವರನ್ನು ಒಮ್ಮೆಗೆ ಗಲ್ಲಿಗೇರಿಸಿದರೆ, ಈ ಮೂಲಕ ಆರೋಪಿಗಳನ್ನು ಏಕಕಾಲದಲ್ಲೇ ಗಲ್ಲಿಗೇರಿಸುವ ದೇಶದ ಮೊದಲ ಕಾರಾಗೃಹ ತಿಹಾರ್ ಜೈಲಾಗಲಿದೆ ಎಂಬ ಖ್ಯಾತಿ ಪಡೆಯಲಿದೆ ಎನ್ನಲಾಗುತ್ತಿದೆ.
'ಕೋರ್ಟ್‌ಆ ದೇಶ ನನಗೆ ತುಂಬಾ ಸಂತೋಷ ತಂದಿದೆ'
ದೆಹಲಿ ನ್ಯಾಯಾಲಯದ ತೀರ್ಪು ನನಗೆ ಅತೀವ ಸಂತಸ ತಂದಿದೆ. ಈ ನಿರ್ಧಾರದಿಂದ ಮುಂದೆ ಅತ್ಯಾಚಾರದಂತಹ ಅಪರಾಧ ಮಾಡುವವರಿಗೆ ಭಯ ಉಂಟು ಮಾಡಿದೆ ಎಂದು ನಿರ್ಭಯಾ ಅತ್ಯಾಚಾರ ಸಂತ್ರಸ್ತೆಯ ತಂದೆ ಬದ್ರಿನಾಥ್ ಸಿಂಗ್ ಹರ್ಷ ವ್ಯಕ್ತಪಡಿಸಿದ್ದಾರೆ.