ನವದೆಹಲಿ:ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ದೆಹಲಿಯಲ್ಲಿ ಇಂದು ಕಾಂಗ್ರೆಸ್ ಪಕ್ಷ ಪ್ರಣಾಳಿಕೆ ಬಿಡುಗಡೆ ಮಾಡಿದೆ.
ಶೇ.33ರಷ್ಟು ಮಹಿಳಾ ಮೀಸಲಾತಿ, 22 ಲಕ್ಷ ಸರ್ಕಾರಿ ನೌಕರಿ ಭರ್ತಿ ಹಾಗೂ 'ನ್ಯಾಯ್' ಯೋಜನೆಯ ಮೂಲಕ ಐದು ಕೋಟಿ ಬಡವರಿಗೆ ವರ್ಷಕ್ಕೆ 72 ಸಾವಿರ ಹಣ. ಇವೇ ಕಾಂಗ್ರೆಸ್ ಪ್ರಣಾಳಿಕೆ ಪ್ರಮುಖ ಅಂಶಗಳು.
ಮೋದಿ ಸರ್ಕಾರವನ್ನು ಹಳಿಯುತ್ತಲೇ ಪ್ರಣಾಳಿಕೆ ಬಿಡುಗಡೆ ಮಾಡಿದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಉತ್ತಮ ಸ್ಮಾರ್ಟ್ ಸಿಟಿಗಳನ್ನು ಉತ್ತಮ ನಾಯಕರು ಮಾತ್ರ ನಿರ್ಮಿಸಲು ಸಾಧ್ಯ ಎಂದು ಪರೋಕ್ಷವಾಗಿ ಕಾಂಗ್ರೆಸ್ ಆಡಳಿತಕ್ಕೆ ಮತದಾರರು ಮಣೆ ಹಾಕಬೇಕು ಎಂದಿದ್ದಾರೆ. ಯುವಕರಿಗೆ ಉದ್ಯೋಗ ಸೃಷ್ಟಿ ಮಾಡಲು ಕಾಂಗ್ರೆಸ್ ಅದ್ಭುತ ಪ್ಲಾನ್ ಮಾಡಿದೆ ಎಂದು ರಾಗಾ ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ. ಮುಂದಿನ ಐದು ವರ್ಷ ನಾವೇ ಆಡಳಿತ ನಡೆಸಲಿದ್ದೇವೆ ಎಂದು ರಾಹುಲ್ ಗಾಂಧಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀತಿ ಆಯೋಗವನ್ನು ಯೋಜನಾ ಆಯೋಗವನ್ನಾಗಿ ಬದಲಿಸಲಾಗುವುದು ಎಂದು ಇದೇ ವೇಳೆ ಹೇಳಿದ್ದಾರೆ.