ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆ ಹಿನ್ನೆಲೆ ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯಯನ್ನು ಬಿಡುಗಡೆ ಮಾಡಿದ್ದು, 5000 ದಿಂದ 7,500 ಮಾಸಿಕ ನಿರುದ್ಯೋಗಿ ಭತ್ಯೆ, ನೀರು ಮತ್ತು ವಿದ್ಯುತ್ ದರದಲ್ಲಿ ಗ್ರಾಹಕರಿಗೆ ಕ್ಯಾಶ್ ಬ್ಯಾಕ್ ಮತ್ತು ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧ ಸುಪ್ರೀಂಕೋರ್ಟ್ನಲ್ಲಿ ಕಾನೂನು ಸಮರ ನಡೆಸುವುದು ಸೇರಿದಂತೆ ಬರಪೂರ ಭರವಸೆಗಳನ್ನು ನೀಡಿದೆ.
ಪ್ರಣಾಳಿಕೆ ಬಿಡುಗಡೆ ಮಾಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ ಶುಭಾಶ್ ಚೋಪ್ರಾ, ಪ್ರತೀ ವರ್ಷ ರಾಜ್ಯ ಬಜೆಟ್ನಲ್ಲಿ 25 ಶೇ. ಹಣವನ್ನು ದೆಹಲಿಯ ಸಾರಿಗೆ ಅಭಿವೃದ್ದಿ ಮತ್ತು ಮಾಲಿನ್ಯ ನಿಯಂತ್ರಣಕ್ಕೆ ಮೀಸಲಿಡಲಾಗುವುದು ಎಂದು ತಿಳಿಸಿದರು.
ದೆಹಲಿ ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಇನ್ನುಳಿದಂತೆ, ಪ್ರತೀ ತಿಂಗಳು 300 ಯುನಿಟ್ ಉಚಿತ ವಿದ್ಯುತ್, ನಗರದಾದ್ಯಂತ 15 ರೂಪಾಯಿಗೆ ಆಹಾರ ಒದಗಿಸುವ 100 ಇಂದಿರಾ ಕ್ಯಾಂಟೀನ್ಗಳನ್ನು ತೆರೆಯುವುದು ಮತ್ತು ಯುವ ಸ್ವಾಭಿಮಾನ್ ಯೋಜನೆಯಡಿ ನಿರುದ್ಯೋಗಿ ಯುವ ಪದವೀದರರಿಗೆ 5 ಸಾವಿರ ಮತ್ತು ಸ್ನಾತಕೋತ್ತರ ಪದವೀದರರಿಗೆ 7,500 ರೂ. ಮಾಸಿಕ ಭತ್ಯೆಯನ್ನು ನೀಡುವುದು ಒಳಗೊಂಡಿದೆ. ಎಎಪಿ ಮತ್ತು ಬಿಜೆಪಿ ಪಕ್ಷಗಳು ತಮ್ಮ ಪ್ರಣಾಳಿಕೆ ಬಿಡುಗಡೆ ಮಾಡಿದ ಬೆನ್ನಲ್ಲೆ ಕಾಂಗ್ರೆಸ್ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ.
ಪ್ರಮುಖವಾಗಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧ ಸುಪ್ರೀಂಕೋರ್ಟ್ನಲ್ಲಿ ನ್ಯಾಯಾಂಗ ಸಮರ ನಡೆಸುವುದಾಗಿ ತಿಳಿಸಿದೆ. ಅಲ್ಲದೆ, ದೆಹಲಿಯಲ್ಲಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿದರೆ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ಆರ್ಸಿ) ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್ಪಿಆರ್) ಜಾರಿ ಮಾಡುವುದಿಲ್ಲ ಎಂದು ಘೋಷಿಸಿದೆ.
ಇನ್ನು ಅಧಿಕಾರಕ್ಕೆ ಬಂದ 6 ತಿಂಗಳ ಒಳಗಾಗಿ ಲೋಕ್ಪಾಲ್ ಮಸೂದೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವುದು, ವಿದ್ಯುತ್ ಉಳಿತಾಯ ಮಾಡುವ ಗ್ರಾಹಕರಿಗೆ ಪ್ರತೀ ತಿಂಗಳು 300 ಯುನಿಟ್ ಉಚಿತ ವಿದ್ಯುತ್, ಶೀಲಾ ಪೆನ್ಶನ್ ಯೋಜನೆಯನ್ನು ಜಾರಿಗೆ ತಂದು ಹಿರಿಯ ನಾಗರಿಕರಿಗೆ ಪ್ರತೀ ತಿಂಗಳು 5 ಸಾವಿರ ರೂ. ಪಿಂಚಣಿ ನೀಡುವುದು, "ಯಾರಿ ಸ್ಟಾರ್ಟ್ಅಪ್ ಇನ್ಕ್ಯುಬೇಷನ್ ಫಂಡ್" ಸ್ಥಾಪಿಸಿ ಸ್ಟಾರ್ಟ್ ಅಪ್ ಗಳ ಉತ್ತೇಜನಕ್ಕೆ 5 ಸಾವಿರ ಕೋಟಿ ಮೀಸಲಿಡುವುಡುವುದು, ದೇವಿ-ದೆಹಲಿ ಎಲೆಕ್ಟ್ರಿಕ್ ವೆಹಿಕಲ್ಸ್ ಯೋಜನೆಯಡಿ ದೆಹಲಿಯನ್ನು ಭಾರತದ ಪ್ರಥಮ ವಿದ್ಯುತ್ ಚಾಲಿತ ವಾಹನಗಳ ನಗರವನ್ನಾಗಿ ಮಾರ್ಪಡಿಸುವುದು ಕೈ ಬಣದ ಪ್ರಣಾಳಿಕೆಯ ಪ್ರಮುಖ ಅಂಶಗಳಾಗಿವೆ.
ಇದೇ ವೇಳೆ ಕಾಂಗ್ರೆಸ್ ಚುನಾವಣಾ ಪ್ರಚಾರದ "ಐಸಿ ಹೋಗಿ ಹಮಾರಿ ದಿಲ್ಲಿ " ಹಾಡನ್ನು ಬಿಡುಗಡೆ ಮಾಡಲಾಯಿತು. ಹಿರಿಯ ನಾಯಕ ಆನಂದ್ ಶರ್ಮಾ, ಪ್ರಣಾಳಿಕೆ ಸಮಿತಿಯ ಅಜಯ್ ಮಕೇನ್, ರಾಜೀವ್ ಗೌಡ, ಶರ್ಮಿಷ್ಠಾ ಮುಖರ್ಜಿ ಉಪಸ್ಥಿತರಿದ್ದರು.