ನವದೆಹಲಿ:ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಇಂದು ಪ್ರಧಾನಿ ನರೇಂದ್ರ ಮೋದಿಯವರನ್ನು ಸಂಸತ್ತಿನಲ್ಲಿ ಭೇಟಿಯಾದರು. ಇಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಸಂಸತ್ತಿನ ಆವರಣದಲ್ಲಿರುವ ಪ್ರಧಾನ ಮಂತ್ರಿಯ ಕೋಣೆಯಲ್ಲಿ ಸಭೆ ನಡೆದಿದ್ದು, ಈಶಾನ್ಯ ದೆಹಲಿಯ ಹಿಂಸಾಚಾರದ ಕುರಿತು ಚರ್ಚಿಸಿದ್ದಾರೆ.
ನಿನ್ನೆ ನವದೆಹಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅವರು ಪಿಎಂ ಅವರನ್ನು ಭೇಟಿಯಾಗಿ ದೆಹಲಿ ಗಲಭೆ ಬಗ್ಗೆ ವಿವರಿಸಿದ್ದರು. ಇದು ದೆಹಲಿ ವಿಧಾನಸಭಾ ಚುನಾವಣಾ ಫಲಿತಾಂಶ ಮತ್ತು ಈಶಾನ್ಯ ದೆಹಲಿಯಲ್ಲಿ ನಡೆದ ಹಿಂಸಾಚಾರದ ಬಳಿಕ ಕೇಜ್ರಿವಾಲ್ ಮತ್ತು ಪ್ರಧಾನಿ ಮೋದಿ ನಡುವಿನ ಮೊದಲ ಭೇಟಿಯಾಗಿದೆ.
ಲೆಫ್ಟಿನೆಂಟ್ ಗವರ್ನರ್ ಬೈಜಾಲ್ ಮತ್ತು ಪೊಲೀಸ್ ಆಯುಕ್ತ ಎಸ್.ಎನ್. ಶ್ರೀವಾಸ್ತವ ಅವರೊಂದಿಗೆ ನಿನ್ನೆ ಚಂದ್ ಬಾಗ್ ಮತ್ತು ಶಿವ ವಿಹಾರ್ ಸೇರಿದಂತೆ ಸಂತ್ರಸ್ತ ಪ್ರದೇಶಗಳಲ್ಲಿ ಪ್ರವಾಸ ಮಾಡಿ ಅಲ್ಲಿನ ಜನರನ್ನು ಭೇಟಿ ಮಾಡಿದರು. ಹಾಗೆಯೇ ಹಿಂಸಾಚಾರದಲ್ಲಿ ನರಳಿದ ಸಂತ್ರಸ್ತರಿಗೆ 24 ಗಂಟೆಗಳೊಳಗೆ ಪರಿಹಾರ ಕೊಡಲು ಯತ್ನಿಸಲಾಗುತ್ತಿದೆ ಎಂದು ಹೇಳಿದ್ದು, ಸಂತ್ರಸ್ತ ಪ್ರದೇಶಗಳಲ್ಲಿ ಹೆಚ್ಚಿನ ಸಹಾಯದ ಅಗತ್ಯವಿರುವವರ ಬಗ್ಗೆ ಸರ್ಕಾರಕ್ಕೆ ತಿಳಿಸಿ ಎಂದು ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಇನ್ನು ಹಿಂಸಾಚಾರವನ್ನು ನಿಯಂತ್ರಿಸುವಲ್ಲಿ ದೆಹಲಿ ಪೊಲೀಸರು ನಿಷ್ಕ್ರಿಯರಾಗಿದ್ದಾರೆ ಎಂದು ಆಡಳಿತಾರೂಢ ಆಮ್ ಆದ್ಮಿ ಪಕ್ಷ ಟೀಕಿಸಿದೆ. ಹಿಂಸಾಚಾರ ಪೀಡಿತ ಪ್ರದೇಶಗಳಿಂದ 'ಮುಗ್ದ' ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಪಕ್ಷದ ಹಿರಿಯ ಮುಖಂಡ ಗೋಪಾಲ್ ರೈ ಆರೋಪಿಸಿದ್ದಾರೆ.