ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿವಿಧ ಕೃಷಿ ಮಸೂಧೆಗಳ ವಿರುದ್ಧ ರೈತರು ರಸ್ತೆಗಿಳಿದು ಹೋರಾಟ ಆರಂಭಿಸಿದ್ದು, ವಿವಿಧೆಡೆಯಿಂದ ರೈತರು ‘ದೆಹಲಿ ಚಲೋ’ ಆರಂಭಿಸಿದ್ದಾರೆ.
ಕಳೆದೊಂದು ವಾರದ ಹಿಂದೆ ದೆಹಲಿ ಚಲೋ ನಡೆಸುವ ಕುರಿತು ಎಲ್ಲ ರೈತ ಸಂಘಟನೆಗಳು ಕರೆ ನೀಡಿದ್ದವು. ಈ ಹಿನ್ನೆಲೆ ದೆಹಲಿ ಹರಿಯಾಣ - ಹೆದ್ದಾರಿಯಲ್ಲಿ ಸಾವಿರಾರು ರೈತರು ಜಮಾಯಿಸಿದ್ದು, ದೆಹಲಿವರೆಗೆ ಪಾದಯಾತ್ರೆ ಕೈಗೊಳ್ಳಲಿದ್ದಾರೆ.
ದೇಶದ ಎಲ್ಲೆಡೆಯಿಂದಲೂ ರೈತರು ದೆಹಲಿಗೆ ಆಗಮಿಸಲಿದ್ದು, ದೆಹಲಿಗೆ ಸಮೀಪ ಇರುವ ರಾಜ್ಯಗಳಾದ ಹರಿಯಾಣ, ಪಂಜಾಬ್, ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ರಾಜಸ್ಥಾನದಿಂದ ರೈತರು ಟ್ರ್ಯಾಕ್ಟರ್ ಮುಖಾಂತರ ಆಗಮಿಸಲಿದ್ದಾರೆ. ಇಂದು ದೆಹಲಿಯಲ್ಲಿ ಜಮಾವಣೆ ಆಗಿ ನಂತರ ಅನಿರ್ಧಿಷ್ಟಾವಧಿ ಧರಣಿ ನಡೆಸಲು ತೀರ್ಮಾನಿಸಿದ್ದಾರೆ.
ಹರಿಯಾಣದ 6 ಜಿಲ್ಲೆಗಳ ರೈತ ಸಂಘಗಳು, ಅಂದರೆ ಅಂಬಾಲಾ, ಪಂಚಕುಲ, ಯಮುನಾನಗರ್, ಕೈತಾಲ್, ಕರ್ನಾಲ್ ಮತ್ತು ಕುರುಕ್ಷೇತ್ರ ಜಿಲ್ಲೆಗಳು ಅಂಬಾಲಾ ಕಂಟೋನ್ಮೆಂಟ್‌ನಲ್ಲಿರುವ ಮೋಡಾ ಮಂಡಿಯಲ್ಲಿ ಜಮಾಯಿಸಿ ದೆಹಲಿಗೆ ಮೆರವಣಿಗೆ ನಡೆಸಲಿವೆ.
ಈ ಹಿನ್ನೆಲೆ ದೆಹಲಿ - ಹರಿಯಾಣ ಹೆದ್ದಾರಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ರೈತರ ಮೇಲೆ ಡ್ರೋನ್ ಕಣ್ಣಿಡಲಿದೆ. ಇದಲ್ಲದೇ ಹರಿಯಾಣದ ಕರ್ನಲ್ ಬಳಿಯೂ ಅಪಾರ ಸಂಖ್ಯೆ ರೈತರು ಜಮಾಯಿಸುವ ಸೂಚನೆ ಇದ್ದು, ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ.