ನವದೆಹಲಿ :ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮಹತ್ವದ ಘೋಷಣೆ ಮಾಡಿದ್ದಾರೆ. ರಾಷ್ಟ್ರ ರಾಜಧಾನಿಯಲ್ಲಿ ಕೊರೊನಾ ವೈರಸ್ ಸಂಕಟದ ನಡುವೆಯೇ ಕೇಜ್ರಿವಾಲ್ ಸರ್ಕಾರ, ಡೀಸೆಲ್ ದರವನ್ನು ಇಳಿಸುವ ನಿರ್ಧಾರ ಕೈಗೊಂಡಿದೆ. ದೆಹಲಿಯಲ್ಲಿ ಇನ್ನು ಮುಂದೆ ಡೀಸೆಲ್ ಮೇಲೆ ಶೇ. 16ರಷ್ಟು ಮಾತ್ರ ವ್ಯಾಟ್ ವಿಧಿಸಲಾಗುವುದು. ಕೇಜ್ರಿವಾಲ್ ಅವರ ಈ ತೀರ್ಮಾನದಿಂದ ದೆಹಲಿಯಲ್ಲಿ ಡೀಸೆಲ್ ಬೆಲೆ 8 ರೂಪಾಯಿ 36 ಪೈಸೆವರೆಗೆ ಕಡಿಮೆಯಾಗಲಿದೆ.
ದೆಹಲಿಯಲ್ಲೀಗ ಡೀಸೆಲ್ ಬೆಲೆ ಪ್ರತಿ ಲೀಟರ್ಗೆ 82 ರೂಪಾಯಿ ಇದೆ. ವ್ಯಾಟ್ ಅನ್ನು ಶೇ. 30ರಿಂದ ಶೇ.16ಕ್ಕೆ ಇಳಿಸಲಾಗಿದ್ದರಿಂದ ಆ ದರ ಈಗ ಕಡಿಮೆ ಆಗಲಿದೆ ಎಂದು ಸಿಎಂ ಕೇಜ್ರಿವಾಲ್ ಹೇಳಿದ್ದಾರೆ. ಇನ್ಮುಂದೆ ಡೀಸೆಲ್ ಪ್ರತಿ ಲೀಟರ್ಗೆ 73.64 ರೂಪಾಯಿಗೆ ಗ್ರಾಹಕರಿಗೆ ಸಿಗಲಿದೆ ಎಂದು ಇದೇ ವೇಳೆ ಮಾಹಿತಿ ನೀಡಿದರು.
ದೆಹಲಿಯಲ್ಲಿ ಅರ್ಥವ್ಯವಸ್ಥೆಯನ್ನು ಸುಧಾರಿಸುವ ದೃಷ್ಟಿಯಿಂದ ಕ್ಯಾಬಿನೆಟ್ನಲ್ಲಿ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಅಲ್ಲಿನ ಕೇಜ್ರಿವಾಲ್ ತಿಳಿಸಿದ್ದು, ಜನರು ಈಗ ತಮ್ಮ ಕರ್ತವ್ಯಗಳಿಗೆ ಹಾಜರಾಗುತ್ತಿದ್ದಾರೆ. ಪರಿಸ್ಥಿತಿ ಸುಧಾರಿಸುತ್ತಿದೆ. ಜೊತೆಗೆ ಕೊರೊನಾ ಕೇಸ್ಗಳೂ ಕಡಿಮೆ ಆಗುತ್ತಿವೆ ಎಂದು ಖುಷಿ ವ್ಯಕ್ತಪಡಿಸಿದರು.
ಕೊರೊನಾ ವೈರಸ್ ಕಾಟ ಮತ್ತು ಲಾಕ್ಡೌನ್ ಸಂಕಷ್ಟದ ನಡುವೆ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಪ್ರತಿ ದಿನವೂ ಏರಿಕೆಯಾಗಿತ್ತು.
ದೆಹಲಿಯಲ್ಲಿ ಡೀಸೆಲ್ ದರ 80 ರೂಪಾಯಿ ಗಡಿ ದಾಟಿದ್ದು, ಇದೇ ಮೊದಲ ಸಲ ಪೆಟ್ರೋಲ್ಗಿಂತ ಡೀಸೆಲ್ ದರ ದುಬಾರಿಯಾಗಿ ಭಾರೀ ವಿವಾದವೂ ಆಗಿತ್ತು. ದೆಹಲಿಯಲ್ಲಿ ವ್ಯಾಟ್ ಅಧಿಕವಾಗಿರುವುದರಿಂದ ಡೀಸೆಲ್ ಬೆಲೆ ಅಧಿಕವಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿತ್ತು. ಹೀಗಾಗಿ ರಾಜ್ಯ ಸರ್ಕಾರ ಇವತ್ತು ಕೈಗೊಂಡ ನಿರ್ಧಾರದಿಂದಾಗಿ ದೆಹಲಿ ನಿವಾಸಿಗಳಿಗೆ ಡೀಸೆಲ್ ದರ ಏರಿಕೆ 'ಬಿಸಿ' ಸ್ವಲ್ಪ ಕಡಿಮೆಯಾದಂತಾಗಿದೆ.