ನವದೆಹಲಿ:ಮುಂದಿನ ಒಂದು ವಾರದವರೆಗೆ ರಾಷ್ಟ್ರ ರಾಜಧಾನಿಯ ಗಡಿ ಮುಚ್ಚಲಾಗುವುದು ಎಂದು ದೆಹಲಿ ಸಿಎಂ ಕೇಜ್ರಿವಾಲ್ ಹೇಳಿದ್ದಾರೆ. ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಅಗತ್ಯ ಎಂದು ಅವರು ಗಡಿ ಬಂದ್ ಮಾಡುವ ವಿಷಯವನ್ನ ಸ್ಪಷ್ಟಪಡಿಸಿದ್ದಾರೆ. ಇದೇ ವೇಳೆ, ಅಗತ್ಯ ಸೇವೆಗಳಿಗೆ ಮಾತ್ರ ಅವಕಾಶ ನೀಡುವುದಾಗಿ ಹೇಳಿದ್ದಾರೆ.
'ನವದೆಹಲಿ ಗಡಿಗಳನ್ನು ಮುಂದಿನ ಒಂದು ವಾರಗಳ ಕಾಲ ಮುಚ್ಚಲಾಗುವುದು. ಅಗತ್ಯ ಸೇವೆಗಳಿಗೆ ವಿನಾಯಿತಿ ನೀಡಲಾಗಿದೆ. ಪ್ರಜೆಗಳಿಂದ ಸಲಹೆ ಪಡೆದು ಬಳಿಕ ಈ ಒಂದು ವಾರದ ಬೆಳವಣಿಗೆ ನೋಡಿಕೊಂಡು, ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೇವೆ' ಎಂದು ಕೇಜ್ರಿವಾಲ್ ಹೇಳಿದ್ದಾರೆ.
'ಇಲ್ಲಿಯವರೆಗೆ ಅನುಮತಿ ನೀಡಿರುವುದನ್ನು ಹೊರತುಪಡಿಸಿ, ಕ್ಷೌರಿಕ ಅಂಗಡಿಗಳು ಮತ್ತು ಸಲೂನ್ಗಳನ್ನು ಮಾತ್ರ ತೆರೆಯಲಾಗುವುದು. ಆದರೆ, ಸ್ಪಾಗಳನ್ನು ಮುಚ್ಚಲಾಗುತ್ತದೆ. ಮಾರುಕಟ್ಟೆಗಳಲ್ಲಿನ ಅಂಗಡಿಗಳಿಗೆ ಸರಿ - ಬೆಸ ನಿಯಮವನ್ನು ಅನುಸರಿಸುತ್ತಿದ್ದೆವು. ಆದರೆ, ಕೇಂದ್ರ ಸರ್ಕಾರವು ಅಂತಹ ಯಾವುದೇ ನಿಯಮವನ್ನು ಹೇಳಿಲ್ಲ, ಆದ್ದರಿಂದ ಎಲ್ಲ ಅಂಗಡಿಗಳು ತೆರೆಯಬಹುದು ಎಂದಿದ್ದಾರೆ.
'ಆಟೋಗಳು, ಇ-ರಿಕ್ಷಾಗಳು ಮತ್ತು ಇತರ ವಾಹನಗಳಲ್ಲಿ ಪ್ರಯಾಣಿಕರ ಸಂಖ್ಯೆಯನ್ನು ನಿಗದಿಪಡಿಸಲಾಗಿತ್ತು. ಆದರೆ, ಈಗ ಪ್ರಯಾಣಿಕರ ಸಂಖ್ಯೆಯ ಮೇಲಿನ ನಿರ್ಬಂಧಗಳನ್ನು ತೆಗೆದುಹಾಕುತ್ತಿದ್ದೇವೆ ಎಂದು ಕೇಜ್ರಿವಾಲ್ ಹೇಳಿದ್ದಾರೆ. 'ರಾತ್ರಿ 9 ರಿಂದ ಬೆಳಗ್ಗೆ 5 ರವರೆಗೆ ಅಗತ್ಯ ಸೇವೆಗೆ ಸಂಬಂಧಿಸಿದ ಜನರನ್ನು ಹೊರತುಪಡಿಸಿ ಯಾರೂ ಹೊರ ಹೋಗುವಂತಿಲ್ಲ ಎಂದು ಕೇಂದ್ರ ನಿರ್ಧರಿಸಿದೆ. ದೆಹಲಿ ಸರ್ಕಾರ ಕೂಡ ಅದನ್ನು ಜಾರಿಗೆ ತರಲಿದೆ. ರಾಷ್ಟ್ರ ರಾಜಧಾನಿಯಲ್ಲಿ ಕೈಗಾರಿಕೆಗಳು ಕೂಡ ಕಾರ್ಯ ನಿರ್ವಹಿಸಲು ಅನುಮತಿ ನೀಡಲಾಗಿದೆ ಎಂದು ಅರವಿಂದ್ ಕೇಜ್ರಿವಾಲ್ ಮಾಹಿತಿ ನೀಡಿದ್ದಾರೆ.