ನವದೆಹಲಿ: ದೇಶಾದ್ಯಂತ ತೀವ್ರ ಕುತೂಹಲ ಕೆರಳಿಸಿರುವ ದೆಹಲಿ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗ್ತಿದ್ದು, ಅರವಿಂದ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷ ಭಾರಿ ಮುನ್ನಡೆ ಕಾಯ್ದುಕೊಂಡಿದೆ.
ಆಪ್ಗೆ ಭಾರಿ ಮುನ್ನಡೆ: ತೀವ್ರ ಕುತೂಹಲ ಕೆರಳಿಸಿದ ದೆಹಲಿ ವಿಧಾನಸಭೆ ಫಲಿತಾಂಶ - ದೆಹಲಿ ವಿಧಾನಸಭೆ ಚುನಾವಣೆ ಫಲಿತಾಂಶ
ದೇಶಾದ್ಯಂತ ತೀವ್ರ ಕುತೂಹಲ ಕೆರಳಿಸಿರುವ ದೆಹಲಿ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗ್ತಿದೆ.
ಈಗಿನ ಟ್ರೆಂಡ್ ಪ್ರಕಾರ ಆಮ್ ಆದ್ಮಿ ಪಕ್ಷ 60 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. 10 ಕ್ಷೇತ್ರಗಳಲ್ಲಿ ಬಿಜೆಪಿ ಲೀಡ್ ಪಡೆದಿದೆ. ಕಾಂಗ್ರೆಸ್ ಪಕ್ಷಕ್ಕೆ ಭಾರಿ ಮುಖಭಂಗವಾಗಿದ್ದು, ಖಾತೆಯನ್ನೇ ತೆರೆದಿಲ್ಲ. 70 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 672 ಅಭ್ಯರ್ಥಿಗಳು ಕಣಕ್ಕಿಳಿದಿದ್ದರು. ಕಳೆದ ಬಾರಿಯಂತೆ ಈ ಬಾರಿಯೂ ಆಪ್ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ನಡೆದಿದೆ. ಬಹುತೇಕ ಚುನಾವಣಾ ಪೂರ್ವ ಮತ್ತು ಚುನಾವಣೋತ್ತರ ಸಮೀಕ್ಷೆಗಳು ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಪ್ ಮರಳಿ ಅಧಿಕಾರಕ್ಕೆ ಬರುವ ಭವಿಷ್ಯ ನುಡಿದಿವೆ. ಈ ಭವಿಷ್ಯಗಳು ನಿಜವಾಗುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ. ಇದುವರೆಗಿನ ಫಲಿತಾಂಶ ಭವಿಷ್ಯ ನಿಜವಾಗಿಸುವತ್ತ ಮುನ್ನಡೆದಿದೆ.
2019ರ ಲೋಕಸಭಾ ಚುನಾವಣೆ ಬಳಿಕ ನಡೆದ ಮಹಾರಾಷ್ಟ್ರ, ಹರಿಯಾಣ ಮತ್ತು ಜಾರ್ಖಂಡ್ ವಿಧಾನಸಭೆಗಳಿಗೆ ನಡೆದ ಚುನಾವಣೆಯಲ್ಲೂ ಮೋದಿ- ಶಾ ನೇತೃತ್ವದ ದಂಡು ಮಕಾಡೆ ಮಲಗಿತ್ತು. 1999ರಲ್ಲಿ ಈರುಳ್ಳಿ ತಂದ ಕಣ್ಣೀರು 2020 ಕ್ಕೂ ಮುಂದುವರೆದಿದೆ. ಬರೋಬ್ಬರಿ 22 ವರ್ಷಗಳಿಂದ ದೆಹಲಿಯಲ್ಲಿ ಕಮಲ ಅರಳುವಲ್ಲಿ ವಿಫಲವಾಗಿದೆ. ಇಂದಿನ ಫಲಿತಾಂಶ ಇದೇ ಮಾರ್ಗದಲ್ಲೇ ಸಾಗಿದೆ. ಕಳೆದ ಬಾರಿ ದೆಹಲಿ ಚುನಾವಣೆಯಲ್ಲಿ ಎಲ್ಲರ ನಿರೀಕ್ಷೆಯನ್ನೂ ಮೀರಿ ಆಮ್ ಆದ್ಮಿ ಪಕ್ಷ 70ರ ಪೈಕಿ 67 ಸ್ಥಾನ ಗೆದ್ದುಕೊಂಡು ಐತಿಹಾಸಿಕ ಸಾಧನೆ ಮಾಡಿತ್ತು. ಬಿಜೆಪಿ ಕೇವಲ 3 ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರೆ, ಕಾಂಗ್ರೆಸ್ ಶೂನ್ಯ ಸಂಪಾದನೆ ಮಾಡಿತ್ತು. ಅದೇ ಫಲಿತಾಂಶ ಈ ಬಾರಿಯೂ ಮರುಕಳಿಸುವ ಎಲ್ಲ ಲಕ್ಷಣಗಳು ಈವರೆಗಿನ ಫಲಿತಾಂಶದಿಂದ ಕಂಡು ಬರುತ್ತಿದೆ.