ನವದೆಹಲಿ: ದೀಪಾವಳಿಗೂ ಮುನ್ನವೇ ರಾಷ್ಟ್ರ ರಾಜಧಾನಿಯ ಗಾಳಿ ಸಂಪೂರ್ಣ ಹದಗೆಟ್ಟಿತ್ತು. ಈ ಪ್ರಮಾಣ ಹಬ್ಬದ ದಿನದಂದು ಅಪಾಯಮಟ್ಟ ದಾಟಿದೆ ಎಂದು ಸುದ್ದಿಸಂಸ್ಥೆ ವರದಿ ಮಾಡಿದೆ.
ವಿಷಗಾಳಿಗೆ ರಾಷ್ಟ್ರ ರಾಜಧಾನಿ ತತ್ತರ ದೆಹಲಿಯ ಲೋಧಿಯಲ್ಲಿ ನಸುಕಿನ ವೇಳೆ ಸೂಚ್ಯಂಕ 500 ದಾಖಲಾಗಿದೆ. ಸೂಚ್ಯಂಕ ಗುಣಮಟ್ಟದಲ್ಲಿ 500 ಎಂದರೆ ತೀವ್ರ ಕಳಪೆ ಎಂದು ಕರೆಯುತ್ತಾರೆ. ದೆಹಲಿ ಹಾಗೂ ನೋಯ್ಡಾ ಪ್ರದೇಶಗಳಲ್ಲಿ ವಾಯು ಗುಣಮಟ್ಟ ಸೂಚ್ಯಂಕ ಕ್ರಮವಾಗಿ 306 ಹಾಗೂ 356 ದಾಖಲಾಗಿದೆ. ಇದು ಉಸಿರಾಟಕ್ಕೆ ಯೋಗ್ಯವಲ್ಲ ಎಂದು ತಜ್ಞರು ಹೇಳುತ್ತಾರೆ.
ದೆಹಲಿಯಲ್ಲಿ ಪಟಾಕಿ ಸಿಡಿಸುವ ವಿಚಾರದಲ್ಲಿ ಒಂದಷ್ಟು ನಿರ್ಬಂಧಗಳನ್ನು ಹೇರಿದ್ದರೂ ಹಲವಾರು ಪ್ರದೇಶಗಳಲ್ಲಿ ಜನರು ಈ ನಿಮಯ ಮುರಿದು ಪಟಾಕಿ ಹಚ್ಚಿ ಸಂಭ್ರಮಿಸಿದ್ದಾರೆ. ಪರಿಣಾಮ ವಾಯು ಗುಣಮಟ್ಟ ಕಳಪೆ ಹಂತಕ್ಕೆ ತಲುಪಿದೆ.
ರಾಷ್ಟ್ರ ರಾಜಧಾನಿಗೆ ಹೋಲಿಕೆ ಮಾಡಿದಲ್ಲಿ ವಾಣಿಜ್ಯ ನಗರಿ ಮುಂಬೈನಲ್ಲಿ ಕಳೆದ ಐದು ವರ್ಷದಲ್ಲೇ ದೀಪಾವಳಿ ಸಮಯದಲ್ಲಿ ಗಾಳಿಯ ಗುಣಮಟ್ಟ ಉತ್ತಮ ಸ್ಥಿತಿಯಲ್ಲಿದೆ.
- 0-50 - ಉತ್ತಮ
- 51-100 - ಸಮಾಧಾನಕರ
- 101-200 - ಮಧ್ಯಮ
- 201-300 - ಕಳಪೆ
- 301-400 - ತುಂಬಾ ಕಳಪೆ
- 401-500 - ತೀವ್ರ ಕಳಪೆ