ಬೆಂಗಳೂರು:ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿ ಆತಂಕ ಮೂಡಿಸುತ್ತಿರುವ ವಾಯುಮಾಲಿನ್ಯದ ತೀವ್ರತೆಯ ಕುರಿತು ಸುಪ್ರೀಂಕೋರ್ಟ್‌ನ ಚಾಟಿ ಬೀಸಿದೆ. ಸೂಕ್ತ ಕ್ರಮ ತೆಗೆದುಕೊಳ್ಳದಿರುವುದಕ್ಕೆ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ದೆಹಲಿಗಿಂತನರಕವೇ ಉತ್ತಮವಾಗಿದೆಎಂದು ವ್ಯಂಗ್ಯವಾಡಿದೆ.
ಕೃಷಿ ತ್ಯಾಜ್ಯ ವಿಲೇವಾರಿ ಮಾಡಲು ಸೂಕ್ರ ಕ್ರಮ ತೆಗೆದುಕೊಳ್ಳದ ಪಂಜಾಬ್ ಮತ್ತು ಹರಿಯಾಣದ ಪ್ರಧಾನ ಕಾರ್ಯದರ್ಶಿಗಳನ್ನು ದೇಶದ ಸರ್ವೋಚ್ಛ ನ್ಯಾಯಾಲಯ ಪ್ರಶ್ನಿಸಿದೆ. ದೆಹಲಿಯಲ್ಲಿ ಹೆಚ್ಚುತ್ತಿರುವ ವಾಯು ಮತ್ತು ಜಲ ಮಾಲಿನ್ಯಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು "ನೀವು ಈ ರೀತಿ ಜನರಿಗೆ ಚಿಕಿತ್ಸೆ ನೀಡಬಹುದೆ ಮತ್ತು ಮಾಲಿನ್ಯದಿಂದಾಗಿ ಅವರ ಸಾವಿಗೆ ಅನುಮತಿಸಬಹುದೆ?" ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಸುಪ್ರೀಂಕೋರ್ಟ್‌ನ ಈ ಹೇಳಿಕೆಯು ಮಾಲಿನ್ಯಕ್ಕೆ ತುತ್ತಾದ ಸಂತ್ರಸ್ತರ ಸಂಕಟದ ಪ್ರತಿಬಿಂಬವಾಗಿದೆ. ಕೇಜ್ರಿವಾಲ್ ಸರ್ಕಾರ ಇತ್ತೀಚೆಗೆ 'ವೈದ್ಯಕೀಯ ತುರ್ತುಸ್ಥಿತಿ' ಘೋಷಿಸಿದೆ ಮತ್ತು ನಗರದಲ್ಲಿ ಕಟ್ಟಡ ಸೇರಿದಂತೆ ಎಲ್ಲಾ ಬಗೆಯ ನಿರ್ಮಾಣ ಮತ್ತು ಉರುಳಿಸುವ ಚಟುವಟಿಕೆಗಳನ್ನು ನಿಷೇಧಿಸಿದೆ. ಹರಿಯಾಣ ಸರ್ಕಾರ ಬೆಳೆಯ ಅವಶೇಷಗಳನ್ನು ಸುಡುತ್ತಿದ್ದ ಹಳ್ಳಿಗಳನ್ನು ಗುರುತಿಸಿದೆ ಮತ್ತು ಬಾಡಿಗೆ ಉಳುಮೆ ಯಂತ್ರೋಪಕರಣಗಳ ವಿತರಣೆಯನ್ನು ಕೈಗೆತ್ತಿಕೊಂಡಿದೆ.
ರೈತರಿಗೆ ಹಣಕಾಸಿನ ನೆರವು ನೀಡುವ ತನ್ನ ಆಶ್ವಾಸನೆಯನ್ನು ಪೂರೈಸುವಂತೆ ಪಂಜಾಬ್ ಸರ್ಕಾರ ಕೇಂದ್ರವನ್ನು ಒತ್ತಾಯಿಸಿದೆ. ಬೆಳೆ ತ್ಯಾಜ್ಯವನ್ನು ಉಳುಮೆ ಮಾಡುವುದು ಮತ್ತು ಅದನ್ನು ಭೂಮಿಯಲ್ಲಿಯೇ ಬಿಡುವುದರಿಂದ ಭೂಮಿಯ ಫಲವತ್ತತೆ ಹೆಚ್ಚಾಗುತ್ತದೆ ಮತ್ತು ಲಕ್ಷಾಂತರ ಸೂಕ್ಷ್ಮಜೀವಿಗಳು ನಾಶವಾಗದಂತೆ ರಕ್ಷಿಸುತ್ತದೆ ಎಂದು ರೈತರಿಗೆ ತಿಳಿಸುವಲ್ಲಿ ಈ ಎಲ್ಲ ಸರ್ಕಾರಗಳು ವಿಫಲವಾಗಿವೆ.
ಇದಕ್ಕಾಗಿ ದೆಹಲಿ, ಪಂಜಾಬ್, ಹರಿಯಾಣ ಮತ್ತು ಉತ್ತರಪ್ರದೇಶದ ಸರ್ಕಾರಗಳನ್ನು ಸುಪ್ರೀಂಕೋರ್ಟ್ ಟೀಕಿಸಿದೆ. ಕೇಂದ್ರ ಮತ್ತು ರಾಜ್ಯಗಳಲ್ಲಿನ ಸರ್ಕಾರಗಳು ಪಳೆಯುಳಿಕೆ ಆಧಾರಿತ ಇಂಧನಗಳನ್ನು ಈಗಲಾದರೂ ಪರ್ಯಾಯಗಳಿಗೆ ಬದಲಾಯಿಸುವ ಸಾಧ್ಯತೆಯ ಮೇಲೆ ಗಮನಹರಿಸಬೇಕು ಮತ್ತು ಅದರಲ್ಲಿ ರೈತರ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳಬೇಕು.
ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ನಾಲ್ಕು ವರ್ಷಗಳ ಹಿಂದೆ ದೆಹಲಿಯಲ್ಲಿ ವಾಯುಮಾಲಿನ್ಯಕ್ಕೆ ಮುಖ್ಯ ಕಾರಣವಾದ ಕೃಷಿ ಅವಶೇಷ(ಕೂಳೆ) ಸುಡುವುದನ್ನು ನಿಷೇಧಿಸಬೇಕು ಎಂದು ಆದೇಶಿಸಿತು.
ಆದರೆ, ಸರ್ಕಾರದಿಂದ ಯಾವುದೇ ಕ್ರಮ ಜರುಗಿಸಿರಲಿಲ್ಲ. ಪಂಜಾಬ್ ಮತ್ತು ಹರಿಯಾಣ ಸರ್ಕಾರಗಳು ಕೂಳೆಗಳನ್ನು ಸುಡುವುದನ್ನು ನಿಷೇಧಿಸಲಾಗಿದೆ ಎಂದು ಘೋಷಿಸಿದರೂ ವಾಸ್ತವದಲ್ಲಿ ಇದನ್ನು ರೈತರು ಮುಂದುವರೆಸಿದ್ದಾರೆ. ಯಂತ್ರೋಪಕರಣಗಳ ಮೂಲಕ ಟನ್‌ಗಟ್ಟಲೇ ಭತ್ತದ ಹೊಟ್ಟುಗಳನ್ನು ವಿಲೇವಾರಿ ಮಾಡಲು ಅವರಿಗೆ ಸಾಧ್ಯವಾಗುತ್ತಿಲ್ಲ. ಪರಿಸರ ಮತ್ತು ರಾಷ್ಟ್ರೀಯ ಹಾನಿಯನ್ನು ತಡೆಗಟ್ಟುವ ಪ್ರಯತ್ನಗಳ ಮೊದಲ ಹೆಜ್ಜೆಯಾಗಿ ಕೇಂದ್ರವು ಪ್ರತ್ಯೇಕ ನಿಧಿ ಸ್ಥಾಪಿಸಬೇಕು.
ದೇಶದಲ್ಲಿ ವಾರ್ಷಿಕವಾಗಿ ಹತ್ತು ಲಕ್ಷ ಟನ್‌ನಷ್ಟು ಬೆಳೆ ತ್ಯಾಜ್ಯಗಳನ್ನು ಸುಡಲಾಗುತ್ತಿದೆ. ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶ ಈ ಪ್ರಮಾಣದಲ್ಲಿ ಅರ್ಧಕ್ಕಿಂತ ಅಧಿಕ ಪಾಲು ಪಡೆದಿವೆ. ಆದ್ದರಿಂದ ತುರ್ತು ಕ್ರಮ ಅಲ್ಲಿಂದ ಪ್ರಾರಂಭವಾಗಬೇಕು. ಭತ್ತದ ಕೂಳೆ ಸುಡುವಿಕೆಯಿಂದ ಉಂಟಾಗುವ ವಾಯುಮಾಲಿನ್ಯದ ಸಮಸ್ಯೆ ಮತ್ತು ಗ್ಯಾಸ್ ಚೇಂಬರ್ ತರಹದ ಪರಿಸರದಲ್ಲಿ ವಾಸಿಸುವ ಜನಸಾಮಾನ್ಯರ ಪರಿಸ್ಥಿತಿ ದೆಹಲಿಗೆ ಮಾತ್ರ ಸೀಮಿತವಾಗಿಲ್ಲ. ಉತ್ತರ ಪ್ರದೇಶ, ಮಹಾರಾಷ್ಟ್ರ, ಬಿಹಾರ, ಪಶ್ಚಿಮ ಬಂಗಾಳ ಮತ್ತು ರಾಜಸ್ಥಾನಗಳಲ್ಲಿ ವಾಯುಮಾಲಿನ್ಯ ಸಂಬಂಧಿತ ಸಾವುಗಳು ದೆಹಲಿಗಿಂತ ಹೆಚ್ಚು.