ದೆಹಲಿ:ವಿಧಿ ಯಾರ ಬಾಳಲ್ಲಿ ಹೇಗೆ ಆಟವಾಡುತ್ತೆ ಎಂಬುದನ್ನು ಊಹಿಸಲು ಸಾಧ್ಯವಿಲ್ಲ. ಇಲ್ಲೊಬ್ಬ ಪ್ರತಿಭಾನ್ವಿತ ವಿದ್ಯಾರ್ಥಿ ಪರೀಕ್ಷೆಯಲ್ಲಿ ನೂರಕ್ಕೆ ನೂರು ಅಂಕ ಪಡೆದರೂ ಆ ಖುಷಿ ಅನುಭವಿಸಲು ಆತನಿಗೆ ಸಾಧ್ಯವಾಗಲಿಲ್ಲ.
ದೆಹಲಿಯ ನೋಯಿಡಾ ಪ್ರದೇಶದಲ್ಲಿರುವ ಅಮಿತಿ ಇಂಟರ್ನ್ಯಾಷನಲ್ ಶಾಲೆಯ ವಿದ್ಯಾರ್ಥಿ ವಿನಾಯಕ್ ಶ್ರೀಧರ್, ಈ ಬಾರಿಯ ಸಿಬಿಎಸ್ಇ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಿದ್ದಾನೆ. ಆಂಗ್ಲಭಾಷೆಯಲ್ಲಿ 100, ವಿಜ್ಞಾನ ವಿಷಯದಲ್ಲಿ 96 ಮತ್ತು ಸಂಸ್ಕೃತದಲ್ಲಿ 97 ಅಂಕಗಳನ್ನು ಪಡೆದಿದ್ದಾನೆ.
ಆದ್ರೆ, ಈ ವಿದ್ಯಾರ್ಥಿ ಸ್ನಾಯು ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಎನ್ನಲಾಗಿದೆ. ಕೊನೆಯ ಎರಡು ಪರೀಕ್ಷೆಗಳು ಬಾಕಿಯಿರುವಾಗಲೇ ತೀವ್ರವಾಗಿ ಬಳಲಿದ ಆತ ಚಿಕಿತ್ಸೆ ಫಲಕಾರಿಯಾಗದೇ ಮೃತ ಪಟ್ಟಿದ್ದಾನೆ.
ಪರೀಕ್ಷೆಯಲ್ಲಿ ಸ್ವತಂತ್ರವಾಗಿ ಬರೆಯಲು ಸಾಧ್ಯವಾಗದ ಕಾರಣ ಇಂಗ್ಲಿಷ್ ಮತ್ತು ವಿಜ್ಞಾನ ವಿಷಯಗಳಿಗೆ ಬೇರೊಬ್ಬರ ಸಹಾಯ ಪಡೆದು ಪರೀಕ್ಷೆ ಬರೆದಿದ್ದ.
ಎರಡು ವರ್ಷದ ಬಾಲಕನಿದ್ದಾಗಲೇ ವಿನಾಯಕನಿಗೆ ಸ್ನಾಯು ಸಂಬಂಧಿ ಕಾಯಿಲೆ ಬಾಧಿಸಿದೆ. ಆತನ ದೇಹದ ಚಲನವಲನ ಮಂದಗತಿಯಲ್ಲಿದ್ದರೂ, ಬುದ್ದಿ ಶಕ್ತಿ ಚುರುಕುತನದಿಂದ ಕೂಡಿತ್ತು ಎಂದು ವಿನಾಯಕ್ ತಾಯಿ ಮಮತಾ ಶ್ರೀಧರ್ ಹೇಳಿದ್ದಾರೆ.
ಪರೀಕ್ಷೆಗಳು ಮುಗಿದ ನಂತರ ಕನ್ಯಾಕುಮಾರಿಯ ರಾಮೇಶ್ವರ ದೇವಸ್ಥಾನಕ್ಕೆ ಪ್ರವಾಸ ತೆರಳಬೇಕೆಂಬ ಆಸೆ ವಿದ್ಯಾರ್ಥಿ ವಿನಾಯಕನದ್ದಾಗಿತ್ತು.