ನವದೆಹಲಿ: ಕಳೆದ ಕೆಲ ತಿಂಗಳಿಂದ ಭಾರತ-ಚೀನಾ ನಡುವೆ ಗಡಿಯಲ್ಲಿ ಉಂಟಾಗಿರುವ ಸಂಘರ್ಷದ ಬಗ್ಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇಂದು ಸಂಸತ್ನ ಎರಡು ಸದನದಲ್ಲಿ ಮಾತನಾಡಲಿದ್ದಾರೆ ಎಂದು ತಿಳಿದು ಬಂದಿದೆ.
ನಿನ್ನೆಯಿಂದ ಸಂಸತ್ ಅಧಿವೇಶನ ಆರಂಭಗೊಂಡಿದ್ದು, ಇಂದು ಮಧ್ಯಾಹ್ನ 3ಗಂಟೆಗೆ ರಾಜನಾಥ್ ಮಾತನಾಡಲಿದ್ದಾರೆ ಎಂದು ವರದಿಯಾಗಿದೆ. ಇದೇ ವಿಚಾರವಾಗಿ ವಿಪಕ್ಷಗಳು ಈಗಾಗಲೇ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿರುವ ಕಾರಣ ರಾಜನಾಥ್ ಸಿಂಗ್ ಭಾಷಣ ಮಹತ್ವ ಪಡೆದುಕೊಂಡಿದೆ.
ಸಂಸತ್ ವ್ಯವಹಾರಗಳ ಸಲಹಾ ಸಮಿತಿಯ ಪಟ್ಟಿಯಲ್ಲಿ ಇಂದು ಮಧ್ಯಾಹ್ನ 3 ಗಂಟೆಗೆ ಭಾರತ-ಚೀನಾ ಗಡಿ ಸಂಘರ್ಷದ ಮತ್ತು ಲಡಾಖ್ ಗಡಿಯಲ್ಲಿನ ಸಮಸ್ಯೆ ಬಗ್ಗೆ ರಾಜನಾಥ್ ಸಿಂಗ್ ಮಾತನಾಡಲಿದ್ದಾರೆ ಎಂದು ಉಲ್ಲೇಖಿಸಲಾಗಿದೆ.ಕಳೆದ ಜೂನ್ 15ರಂದು ಚೀನಾ-ಭಾರತ ನಡುವೆ ಲಡಾಖ್ ಗಡಿಯಲ್ಲಿ ನಡೆದ ಸಂಘರ್ಷದಲ್ಲಿ ಭಾರತದ 20 ಯೋಧರು ಹುತಾತ್ಮರಾಗಿದ್ದು, ಇದಾದ ಬಳಿಕ ಎರಡು ದೇಶಗಳ ನಡುವಿನ ಗಡಿ ಪರಿಸ್ಥಿತಿ ಮತ್ತಷ್ಟು ಉದ್ವಿಗ್ನಗೊಂಡಿದೆ.
ಈಗಾಗಲೇ ಮಾಸ್ಕೋದಲ್ಲಿ ರಾಜನಾಥ್ ಸಿಂಗ್ ಅಲ್ಲಿನ ರಕ್ಷಣಾ ಸಚಿವರೊಂದಿಗೆ ಮಹತ್ವದ ಸಭೆ ನಡೆಸಿದ್ದು, ಇದೇ ವೇಳೆ ವಿದೇಶಾಂಗ ಸಚಿವರು ಅಲ್ಲಿನ ಸಚಿವರೊಂದಿಗೆ ಇದೇ ವಿಚಾರವಾಗಿ ಮಾತುಕತೆ ನಡೆಸಿದ್ದರು. ಇದರ ಬೆನ್ನಲ್ಲೇ ರಾಜನಾಥ್ ಸಿಂಗ್ ಇಂದು ಮಾತನಾಡಲಿದ್ದಾರೆ.