ನವದೆಹಲಿ:4ನೇ ದಿನದ ಸಂಸತ್ ಮುಂಗಾರು ಅಧಿವೇಶನದ ರಾಜ್ಯಸಭಾ ಕಲಾಪದಲ್ಲಿ ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿರುವ ಭಾರತ-ಚೀನಾ ನಡುವಿನ ಗಡಿ ಸಮಸ್ಯೆ ಕುರಿತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಾತನಾಡಿದ್ದಾರೆ.
ಜೂನ್ 15 ರಂದು, ಕರ್ನಲ್ ಸಂತೋಷ್ ಬಾಬು ಸೇರಿದಂತೆ 19 ವೀರಸೈನಿಕರು ಪೂರ್ವ ಲಡಾಖ್ನ ಗಾಲ್ವಾನ್ ಕಣಿವೆಯಲ್ಲಿ ತಮ್ಮ ಪ್ರಾಣ ತ್ಯಾಗ ಮಾಡಿದರು. ಸೇನಾ ಪಡೆಗಳ ಸ್ಥೈರ್ಯವನ್ನು ಹೆಚ್ಚಿಸಲು ನಮ್ಮ ಪ್ರಧಾನಿ ಮೋದಿ ಲಡಾಖ್‌ಗೆ ಭೇಟಿ ನೀಡಿದ್ದರು ಎಂದು ಸಚಿವರು ಭಾರತ-ಚೀನಾ ಸೈನಿಕರ ನಡುವೆ ನಡೆದ ಸಂಘರ್ಷದಲ್ಲಿ ಹುತಾತ್ಮರಾದ ಯೋಧರನ್ನು ನೆನೆದರು.
ರಾಜ್ಯಸಭಾ ಕಲಾಪದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೇಂದ್ರಾಡಳಿತ ಪ್ರದೇಶವಾದ ಲಡಾಖ್‌ನಲ್ಲಿ ಚೀನಾ ಸುಮಾರು 38,000 ಚದರ ಕಿ.ಮೀ. ಪ್ರದೇಶವನ್ನು ಅತಿಕ್ರಮಿಸಿದೆ. ಅಲ್ಲದೇ 1963 ರ ಚೀನಾ-ಪಾಕಿಸ್ತಾನ ನಡುವಿನ 'ಗಡಿ ಒಪ್ಪಂದ'ದಡಿ ಪಾಕಿಸ್ತಾನವು ಪಿಒಕೆ ಯಲ್ಲಿನ 5,180 ಚದರ ಕಿ.ಮೀ. ಭಾರತೀಯ ಭೂಪ್ರದೇಶವನ್ನು ಚೀನಾಗೆ ನೀಡಿದೆ. ಅರುಣಾಚಲ ಪ್ರದೇಶದ ಭಾರತ-ಚೀನಾ ಗಡಿಯ ಪೂರ್ವ ವಲಯದಲ್ಲಿನ 90,000 ಚದರ ಕಿ.ಮೀ. ಭಾರತೀಯ ಭೂಪ್ರದೇಶವನ್ನು ಚೀನಾ ಅತಿಕ್ರಮಿಸಿದೆ ಎಂದು ರಾಜನಾಥ್ ಸಿಂಗ್ ಸ್ಪಷ್ಟನೆ ನೀಡಿದ್ದಾರೆ.
ಚೀನಾದ ಕ್ರಮಗಳು ನಮ್ಮ ವಿವಿಧ ದ್ವಿಪಕ್ಷೀಯ ಒಪ್ಪಂದಗಳನ್ನು ಕಡೆಗಣಿಸುವುದನ್ನು ಪ್ರತಿಬಿಂಬಿಸುತ್ತವೆ. 1993 ಮತ್ತು 1996 ರ ಒಪ್ಪಂದಗಳಿಗೆ ವಿರುದ್ಧವಾಗಿ ಚೀನಾ ತನ್ನ ಸೇನೆಯನ್ನು ನಿಯೋಜಿಸುತ್ತಿದೆ. ವಾಸ್ತವಿಕ ಗಡಿ ರೇಖೆಯನ್ನು ಕಟ್ಟುನಿಟ್ಟಾಗಿ ಗಮನಿಸುವುದು ಮತ್ತು ಗೌರವಿಸುವುದರಿಂದ ಗಡಿ ಪ್ರದೇಶಗಳಲ್ಲಿ ಶಾಂತಿ ಮತ್ತು ನೆಮ್ಮದಿ ಸ್ಥಾಪಿಸಬಹುದು. ಇದಕ್ಕೆ ನಮ್ಮ ಸಶಸ್ತ್ರ ಪಡೆಗಳು ಬದ್ಧವಾಗಿದ್ದರೂ, ಚೀನಾ ಒಪ್ಪುತ್ತಿಲ್ಲ. ಭಾರತೀಯ ಸೇನೆ ಸಂದರ್ಭಕ್ಕೆ ತಕ್ಕಂತೆ ಸಂಯಮವನ್ನೂ ತೋರಿಸಿದೆ, ಶೌರ್ಯವನ್ನೂ ಮೆರೆದಿದೆ ಎಂದು ರಕ್ಷಣಾ ಸಚಿವರು ಇದೇ ವೇಳೆ ಹೇಳಿದರು.
ಪ್ರಸ್ತುತ ಕೆಲವು ಸೂಕ್ಷ್ಮ ಕಾರ್ಯಾಚರಣೆಗಳು ನಡೆಯುತ್ತಿದ್ದು, ಈ ಬಗ್ಗೆ ಮಾಹಿತಿ ಬಹಿರಂಗಪಡಿಸಲು ಸಾಧ್ಯವಿಲ್ಲ. ಈ ವಿಚಾರದ ಸೂಕ್ಷ್ಮತೆಯನ್ನು ಮೇಲ್ಮನೆ ಅರ್ಥಮಾಡಿಕೊಳ್ಳುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿ ರಾಜನಾಥ್ ಸಿಂಗ್ ತಮ್ಮ ಮಾತನ್ನು ಮುಗಿಸಿದರು.