ಲಖನೌ: ದೀಪಾವಳಿಯ ಮುನ್ನಾದಿನದಂದು ಅಯೋಧ್ಯೆಯಲ್ಲಿ ವಾರ್ಷಿಕ 'ದೀಪೋತ್ಸವ' ಕಾರ್ಯಕ್ರಮ ನಡೆಯಲಿದೆ. ಕೊರೊನಾ ಹಿನ್ನೆಲೆಯಲ್ಲಿ ಕಡಿಮೆ ಜನರು ಭಾಗವಹಿಸುವ ಅವಕಾಶವಿದ್ದರೂ ಹಬ್ಬಾಚರಣೆ ದೊಡ್ಡ ಪ್ರಮಾಣದಲ್ಲಿ ನಡೆಯಲಿದೆ.
ರಾಮ ದೇವಾಲಯ ನಿರ್ಮಾಣ ಪ್ರಾರಂಭವಾದ ನಂತರ ನಡೆಯುತ್ತಿರುವ ಮೊದಲ ದೀಪೋತ್ಸವ ಇದಾಗಿರುವುದರಿಂದ, ಈ ಆಚರಣೆಯು ಎಂದಿಗಿಂತಲೂ ಭವ್ಯವಾಗಿರಬೇಕೆಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಯೋಚಿಸಿದ್ದಾರಂತೆ.
ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಿಎಂ ಯೋಗಿ ಸಭೆ ನಡೆಸಿದ್ದು, ಉತ್ಸವದ ಬಗ್ಗೆ ಮಾಹಿತಿ ಕೇಳಿದ್ದಾರೆ. ಈ ವರ್ಷ ದೀಪೋತ್ಸವವು ಸ್ಮರಣೀಯವಾಗಬೇಕು. ಪ್ರಪಂಚದಾದ್ಯಂತ ಜನರು ಈ ಉತ್ಸವವನ್ನು ವರ್ಚ್ಯುವಲ್ ಆಗಿ ವೀಕ್ಷಿಸಲು ಅನುವು ಮಾಡಲಾಗುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ದೀಪದ ಉತ್ಸವವನ್ನು 2017 ರಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಪ್ರಾರಂಭಿಸಿದ್ದಾರೆ. ಈ ಆಚರಣೆಯಲ್ಲಿ ಸ್ಥಳೀಯ ನಿವಾಸಿಗಳು, ಸ್ವಯಂಸೇವಕರು ಮತ್ತು ಭಕ್ತರು ಒಗ್ಗೂಡಿ 1.76 ಲಕ್ಷ ಮಣ್ಣಿನ ದೀಪಗಳನ್ನು ಬೆಳಗಿಸುತ್ತಾರೆ. ಕಳೆದ ವರ್ಷ ಅಯೋಧ್ಯೆ 5.51 ಲಕ್ಷ ದೀಪಗಳನ್ನು ಬೆಳಗಿಸುವ ಮೂಲಕ ವಿಶ್ವ ದಾಖಲೆ ಬರೆಯಲಾಗಿತ್ತು. ಇದು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನಲ್ಲಿ ಸ್ಥಾನ ಗಳಿಸಿತ್ತು.