ನವದೆಹಲಿ: ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ತಮ್ಮ ಪತಿಯಿಂದ ವಿಚ್ಛೇದನ ಪಡೆದಿದ್ದು, ಈ ವಿಷಯವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಸ್ವಾತಿ ಅವರ ಪತಿ ನವೀನ್ ಜೈಹಿಂದ್ ಹರ್ಯಾಣದ ಆಮ್ ಆದ್ಮಿ ಪಕ್ಷದ ಮಖ್ಯಸ್ಥರಾಗಿದ್ದು, ಅಣ್ಣಾ ಹಜಾರೆ ನಡೆಸಿದ ಭ್ರಷ್ಟಾಚಾರ ವಿರುದ್ಧದ ಹೋರಾಟದ ಆಂತರಿಕ ಸಮಿತಿಯ ಸದಸ್ಯರೂ ಕೂಡ ಆಗಿದ್ದರು. ಈ ಹೋರಾಟದಲ್ಲಿ ಅವರು ಪ್ರಮುಖ ಪಾತ್ರವನ್ನೂ ನಿರ್ವಹಿಸಿದ್ದರು.
ಇದೇ ಹೋರಾಟದಲ್ಲಿ ಮಲಿವಾಲ್ ಅವರು ಜೈಹಿಂದ್ ಅವರನ್ನು ಭೇಟಿಯಾಗಿದ್ದರು. ಇವರಿಬ್ಬರ ನಡುವೆ ಪ್ರೇಮಾಂಕುರವಾಗಿ ನಂತರ ಮದುವೆಯಾಗಿದ್ದರು. ಬಳಿಕ ಮಲಿವಾಲ್ ಅವರು ಮಹಿಳಾ ಆಯೋಗದ ಅಧ್ಯಕ್ಷೆಯಾಗಿ ಅಧಿಕಾರ ವಹಿಸಿಕೊಂಡಿದ್ದರು.
2018ರಲ್ಲಿ ಜೈಹಿಂದ್ ನೀಡಿದ್ದ ಹೇಳಿಕೆಯೊಂದು ಭಾರಿ ವಿವಾದಕ್ಕೆ ಎಡೆ ಮಾಡಿಕೊಟ್ಟಿತ್ತು. 10 ಮಂದಿಯಿಂದ ಅತ್ಯಾಚಾರಕ್ಕೆ ಒಳಗಾಗಲು ಸಿದ್ಧವಿರುವ ಬಿಜೆಪಿ ನಾಯಕಿಗೆ ತಾವು 20 ಲಕ್ಷ ರೂಪಾಯಿ ಇನಾಮು ಕೊಡುವುದಾಗಿ ಹೇಳಿದ್ದರು. ಇದರಿಂದ ಮುಜುಗರಕ್ಕೆ ಒಳಗಾಗಿದ್ದ ಪತ್ನಿ ಸ್ವಾತಿ ಮಲಿವಾಲ್, ಅತ್ಯಾಚಾರ ಪ್ರಕರಣಗಳಿಂದ ಬೇಸತ್ತು ಅವರು ಇಂಥ ಹೇಳಿಕೆ ನೀಡಿದ್ದಾರೆ ಎಂದಿದ್ದರು.