ನವದೆಹಲಿ: ಇತರ ದೇಶಗಳಲ್ಲಿ ಕೋವಿಡ್-19ಗಾಗಿ ಆಕ್ಸ್‌ಫರ್ಡ್ ಲಸಿಕೆಯ ಕ್ಲಿನಿಕಲ್ ಪ್ರಯೋಗಗಳನ್ನು ಸ್ಥಗಿತಗೊಳಿಸಿದ ಫಾರ್ಮಾ ದೈತ್ಯ ಅಸ್ಟ್ರಾಜೆನೆಕಾ ಮಾಹಿತಿ ನೀಡದ ಕಾರಣ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾಗೆ (ಎಸ್‌ಐಐ) ಕೇಂದ್ರ ಔಷಧ ನಿಯಂತ್ರಣದಿಂದ ನೋಟಿಸ್ ನೀಡಲಾಗಿದೆ.
ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯವು ಅಭಿವೃದ್ಧಿಪಡಿಸುತ್ತಿರುವ ಅತ್ಯಂತ ಭರವಸೆಯ ಕೋವಿಡ್-19 ಲಸಿಕೆ ಮಾನವ ಪ್ರಯೋಗದ ವೇಳೆ ವ್ಯಾಕ್ಸಿನ್ ಪಡೆದ ಓರ್ವ ವ್ಯಕ್ತಿ ಅನಾರೋಗ್ಯಕ್ಕೆ ತುತ್ತಾದ ಹಿನ್ನೆಲೆಯಲ್ಲಿ ಪರೀಕ್ಷೆಯನ್ನು ಸ್ಥಗಿತಗೊಳಿಸಲಾಗಿದೆ ಎಂಬ ವರದಿಗಳ ನಂತರ ನೋಟಿಸ್ ನೀಡಲಾಗಿದೆ.
ರೋಗಿಗಳ ಸುರಕ್ಷತೆ ಬಗ್ಗೆ ಖಚಿತವಾಗುವುದಕ್ಕೂ ಮೊದಲು ದೇಶದಲ್ಲಿ ಲಸಿಕೆಯ 2ನೇ ಹಂತ ಮತ್ತು 3ನೇ ಹಂತದ ಕ್ಲಿನಿಕಲ್ ಪ್ರಯೋಗ ನಡೆಸಲು ಏಕೆ ಅನುಮತಿ ನೀಡಲಾಗಿದೆ ಎಂದು ಎಸ್‌ಡಿಐಗೆ ಭಾರತದ ಡ್ರಗ್ಸ್ ಕಂಟ್ರೋಲರ್ ಜನರಲ್ ಡಾ. ವಿ.ಜಿ.ಸೋಮಾನಿ ಶೋಕಾಸ್ ನೋಟಿಸ್‌ನಲ್ಲಿ ಪ್ರಶ್ನಿಸಿದ್ದಾರೆ.
ಪುಣೆಯ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಇತರ ದೇಶಗಳಲ್ಲಿ ಅಸ್ಟ್ರಾಜೆನೆಕಾ ನಡೆಸಿದ ಕ್ಲಿನಿಕಲ್ ಪ್ರಯೋಗವನ್ನು ನಿಲ್ಲಿಸಿರುವ ಬಗ್ಗೆ ಕೇಂದ್ರ ಪರವಾನಗಿ ಪ್ರಾಧಿಕಾರಕ್ಕೆ ಈವರೆಗೆ ಮಾಹಿತಿ ನೀಡಿಲ್ಲ ಎಂದು ಶೋಕಾಸ್ ನೋಟಿಸ್‌ನಲ್ಲಿ ತಿಳಿಸಲಾಗಿದೆ.
ಭಾರತದ ಡ್ರಗ್ಸ್ ಕಂಟ್ರೋಲರ್ ಜನರಲ್ ಮತ್ತು ಕೇಂದ್ರ ಪರವಾನಗಿ ಪ್ರಾಧಿಕಾರದ ಡಾ. ವಿ.ಜಿ.ಸೋಮಾನಿ ಅವರು 2019ರ ಹೊಸ ಔಷಧ ಮತ್ತು ಕ್ಲಿನಿಕಲ್ ಟ್ರಯಲ್ಸ್ ನಿಯಮಗಳ ಅಡಿಯಲ್ಲಿ ಏಕೆ ಅನುಮತಿ ನೀಡಲಾಗಿದೆ ಎಂಬ ಬಗ್ಗೆ ಕಾರಣ ನೀಡುವಂತೆ ತಿಳಿಸಿದ್ದು, ಇಲ್ಲವಾದಲ್ಲಿ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ.
ಯುಕೆಯಲ್ಲಿ ನಡೆಯುತ್ತಿರುವ ಆಸ್ಟ್ರಾಜೆನೆಕಾ ಲಸಿಕೆಯ ಕ್ಲಿನಿಕಲ್ ಪ್ರಯೋಗದ ವರದಿ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ. ಆದರೆ ಭಾರತದಲ್ಲಿ ಲಸಿಕೆಯ ವೈದ್ಯಕೀಯ ಪ್ರಯೋಗ ಮುಂದುವರೆದಿದ್ದು, ಯಾವುದೇ ವ್ಯತಿರಿಕ್ತ ಪರಿಣಾಮಗಳು ಕಂಡು ಬಂದಿಲ್ಲ ಎಂದು ಎಸ್‌ಐಐ ನಿನ್ನೆ ಮಾಹಿತಿ ನೀಡಿತ್ತು.