ನವದೆಹಲಿ:ಕೊರೊನಾ ಸೋಂಕಿಗೆ ಔಷಧ ಕಂಡು ಹಿಡಿಯಲು ವಿಶ್ವದೆಲ್ಲೆಡೆ ನಾನಾ ರೀತಿಯ ಪ್ರಯೋಗಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ತನ್ನ ಎರಡನೇ ಮತ್ತು ಮೂರು ಕ್ಲಿನಿಕಲ್ ಪ್ರಯೋಗಗಳನ್ನು ಮರುಪ್ರಾರಂಭಿಸಲು ಭಾರತೀಯ ಔಷಧ ನಿಯಂತ್ರಣ ಮಹಾನಿರ್ದೇಶನಾಲಯ (ಡಿಸಿಜಿಐ) ಅವಕಾಶ ಮಾಡಿಕೊಟ್ಟಿದೆ.
ಎರಡು ಹಾಗೂ ಮೂರನೇ ಹಂತದ ಪ್ರಯೋಗಗಳಿಗೆ ಹೊಸ ನಿಯಮಗಳನ್ನು ರೂಪಿಸಬೇಕೆಂಬುವ ಆದೇಶವನ್ನೂ ಕೂಡ ರದ್ದು ಮಾಡಲಾಗಿದೆ. ಇದರ ಜೊತೆಗೆ ಪ್ರಯೋಗ ನಡೆಸಬೇಕಾದರೆ ಬೇಕಾದ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಡಿಸಿಜಿಐ ಸೂಚನೆ ನೀಡಿದೆ.
ಆಸ್ಟ್ರಾಜೆಂಕಾ ಹಾಗೂ ಆಕ್ಸ್ಫರ್ಡ್ ವಿವಿಯಿಂದ ಕೊರೊನಾ ಔಷಧ ಸಿದ್ಧವಾಗುತ್ತಿರುವ ಹಿನ್ನೆಲೆಯಲ್ಲಿ ಎರಡು ಹಾಗೂ ಮೂರನೇ ಹಂತದ ಪ್ರಯೋಗಕ್ಕೆ ಅವಕಾಶ ನೀಡಬೇಕೆಂದು ಡಾಟಾ ಸೇಫ್ಟಿ ಮಾನಿಟರಿಂಗ್ ಬೋರ್ಡ್ (ಡಿಎಸ್‌ಎಂಬಿ) ಶಿಫಾರಸು ಮಾಡಿದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಭಾರತೀಯ ಔಷಧ ನಿಯಂತ್ರಣ ಮಹಾನಿರ್ದೇಶನಾಲಯದ ಮುಖ್ಯಸ್ಥರಾದ ವಿ.ಜಿ.ಸೋಮನಿ ಈ ಕುರಿತು ಡಿಜಿಸಿಐಗೆ ಪತ್ರ ಬರೆದಿದ್ದು, ಡಿಎಸ್‌ಎಂಬಿಯ ಶಿಫಾರಸುಗಳನ್ನು ಸೂಕ್ಷ್ಮವಾಗಿ ಪರಿಶೀಲನೆ ನಡೆಸಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಕೆಲವು ದಿನಗಳ ಹಿಂದೆ ಕಾರಣಾಂತರಗಳಿಂದ ಅಸ್ಟ್ರಾಜೆನಿಕಾ ಔಷಧ ತಯಾರಿಕೆಯ ಕ್ಲಿನಿಕಲ್ ಟ್ರಯಲ್ಗೆ ಅನುಮತಿ ನಿರಾಕರಿಸಲಾಗಿತ್ತು. ಭಾರತದಲ್ಲಿ ಮಾತ್ರವಲ್ಲದೇ ಅಮೆರಿಕಾ, ಇಂಗ್ಲೆಂಡ್, ಬ್ರೆಜಿಲ್, ದಕ್ಷಿಣ ಆಫ್ರಿಕಾದಲ್ಲಿ ಔಷಧ ಪ್ರಯೋಗ ನಡೆಸಲು ನಿರಾಕರಿಸಲಾಗಿತ್ತು.