ಗುವಾಹಟಿ(ಅಸ್ಸಾಂ): ಇಲ್ಲಿನ ಕಛಾರ್ ಜಿಲ್ಲೆಯ ಜಿಲ್ಲಾಧಿಕಾರಿ, ತಮ್ಮ ವಿವಾಹಕ್ಕೂ ರಜೆ ತೆಗೆದುಕೊಳ್ಳದೆ ಕೋವಿಡ್ ಮಹಾಮಾರಿಯ ವಿರುದ್ಧ ಸಮರ ಸಾರಿದ್ದಾರೆ. ತಮ್ಮ ದಿಟ್ಟ ನಿರ್ಧಾರದಿಂದ ಕರ್ತವ್ಯನಿಷ್ಠೆ ಮೆರೆದಿದ್ದಾರೆ.
ಕೊರೊನಾ ವ್ಯಾಪಿಸಿರುವ ಈ ಸಂದರ್ಭದಲ್ಲಿ ತನ್ನ ವೈಯಕ್ತಿಕ ಬದುಕಿಗಿಂತ ವೃತ್ತಿ ಜೀವನವೇ ಮುಖ್ಯ ಎಂದು ಈ ಮಹಿಳಾ ಜಿಲ್ಲಾಧಿಕಾರಿ ತಮ್ಮ ವಿವಾಹಕ್ಕೂ ರಜೆ ತೆಗೆದುಕೊಂಡಿಲ್ಲ. 2013 ರ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿರುವ ಕೀರ್ತಿ ಜಲ್ಲಿ, ವಿವಾಹಕ್ಕಾಗಿ ಕನಿಷ್ಠ ಒಂದು ದಿನದ ರಜೆಯನ್ನೂ ಹಾಕದೆ ವೃತ್ತಿ ಬದುಕೇ ತನಗೆ ಮುಖ್ಯ ಎಂದಿದ್ದಾರೆ. ನನ್ನ ಜವಾಬ್ದಾರಿಗಳನ್ನು ಬದಿಗಿಟ್ಟು ಮದುವೆಗಾಗಿ ಹೈದರಾಬಾದ್‌ನಲ್ಲಿರುವ ಮನೆಗೆ ಬರಲು ಸಾಧ್ಯವಿಲ್ಲ ಎಂದು ಹೇಳಿ ತಮ್ಮ ಕುಟುಂಬ ಮತ್ತು ಸ್ನೇಹಿತರನ್ನು ಕೀರ್ತಿ ಅಚ್ಚರಿಗೊಳಿಸಿದ್ದಾರೆ.
ನನ್ನ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿವೆ. ಈ ಸಂದರ್ಭದಲ್ಲಿ ರಜೆ ತೆಗೆದುಕೊಳ್ಳುವ ಬಗ್ಗೆ ಯೋಚನೆ ಮಾಡಲೂ ನನ್ನಿಂದಾಗುತ್ತಿಲ್ಲ. ಮದುವೆ ಅನ್ನೋದು ಪ್ರತಿಯೊಬ್ಬರ ಜೀವನದ ಪ್ರಮುಖ ಘಟ್ಟ ಎಂದು ನನಗೆ ಗೊತ್ತಿದೆ. ಆದರೆ ಇಂತಹ ಸಂದರ್ಭದಲ್ಲಿ ನನ್ನ ಜಿಲ್ಲೆಯನ್ನು ಬಿಟ್ಟು ಹುಟ್ಟೂರಿಗೆ ಹೋಗಲು ನನಗೆ ಇಷ್ಟವಿಲ್ಲ ಎಂದು ಕೀರ್ತಿ ಹೇಳುತ್ತಾರೆ.
ಕೀರ್ತಿಯ ಈ ನಿರ್ಧಾರವನ್ನು ಆಕೆಯ ತಂದೆ-ತಾಯಿ, ವರ ಹಾಗೂ ಕುಟುಂಬಸ್ಥರು ಮುಕ್ತ ಕಂಠದಿಂದ ಮೆಚ್ಚಿದ್ದಾರೆ.
ವಿಶೇಷವೆಂದರೆ ತಮ್ಮ ಭಾವಿ ಪತ್ನಿಯ ಕರ್ತವ್ಯನಿಷ್ಠೆಯನ್ನು ಮೆಚ್ಚಿದ ವರ ಆದಿತ್ಯ ಶಶಿಕಾಂತ್, ಮದುವೆಗಾಗಿ ಅಸ್ಸಾಂಗೆ ತೆರಳಿದ್ದಾರೆ. ಕಳೆದ ಬುಧವಾರ ಅಸ್ಸಾಂನಲ್ಲಿ ಸರ್ಕಾರಿ ರಜಾದಿನವಿದ್ದು, ಅಂದೇ ಇವರಿಬ್ಬರ ಸರಳ ವಿವಾಹ ನಡೆದಿದೆ. ಆ ಭಾಗದ ಕೊರೊನಾ ಮಾನದಂಡಗಳನ್ನು ಪಾಲಿಸುವ ಉದ್ದೇಶದಿಂದ ಶಶಿಕಾಂತ್ ಕೆಲ ದಿನಗಳ ಮುಂಚೆಯೇ ಅಸ್ಸಾಂಗೆ ತೆರಳಿ ಕ್ವಾರಂಟೈನ್ನಲ್ಲಿದ್ದರು. ಬುಧವಾರದಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಆದಿತ್ಯ ಶಶಿಕಾಂತ್ ಕೀರ್ತಿ ಜಲ್ಲಿ ಕೀರ್ತಿಯವರ ತಂದೆ-ತಾಯಿ ಇಬ್ಬರಿಗೂ ಕೆಲ ದಿನಗಳ ಹಿಂದೆ ಕೋವಿಡ್ ದೃಢಪಟ್ಟಿತ್ತು. ಸದ್ಯ ಅವರು ಗುಣಮುಖರಾಗುತ್ತಿದ್ದು, ಅವರೂ ಕೂಡಾ ತಮ್ಮ ಮಗಳ ವಿವಾಹವನ್ನು ಕಣ್ತುಂಬಿಕೊಳ್ಳಲು ಅಸಾಧ್ಯವಾಗಿದೆ. ಕೀರ್ತಿ ಕಡೆಯಿಂದ ವಿವಾಹದ ವೇಳೆ ಅವರ ಸಹೋದರಿ ಮಾತ್ರವೇ ಇದ್ದರು.
ಇಲ್ಲಿನ ಇನ್ನೊಂದು ವಿಶೇಷವೆಂದರೆ, ಈ ವಿವಾಹ ಕಾರ್ಯಕ್ರಮವನ್ನು ಸುಮಾರು 800ಕ್ಕೂ ಹೆಚ್ಚು ಕುಟುಂಬ ಸದಸ್ಯರು ಹಾಗೂ ಸ್ನೇಹಿತರು ಝೂಂ ಆ್ಯಪ್ ಮೂಲಕ ದೇಶ-ವಿದೇಶಗಳಿಂದ ವೀಕ್ಷಿಸಿದ್ದಾರೆ. ನವದಂಪತಿಯನ್ನು ಖುಷಿಯಿಂದ ಹುರಿದುಂಬಿಸುವ ಹಿನ್ನೆಲೆಯಲ್ಲಿ ಅವರೆಲ್ಲರೂ ಮದುವೆ ಕಾರ್ಯಕ್ರಮಕ್ಕೆ ಬಂದವರಂತೆ ಹೊಸ ವಸ್ತ್ರ ಹಾಗೂ ಅಲಂಕಾರ ಮಾಡಿಕೊಂಡು ವಿವಾಹ ವೀಕ್ಷಿಸಿದ್ದಾರೆ