ನವದೆಹಲಿ:ಈಗಾಗಲೇ ಯೋಜನೆ ರೂಪಿಸಿರುವ ಪ್ರಕಾರ ಮುಂಬರುವ ಟಿ-20 ವಿಶ್ವಕಪ್ ಟೂರ್ನಿ ನಡೆಯುವುದು ಡೌಟ್ ಎಂದು ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಅಭಿಪ್ರಾಯಪಟ್ಟಿದ್ದಾರೆ.
ಟೀಂ ಇಂಡಿಯಾ ಆರಂಭಿಕ ಆಟಗಾರ ರೋಹಿತ್ ಶರ್ಮಾ ಜತೆ ಇನ್ಸ್ಟಾಗ್ರಾಂನಲ್ಲಿ ಲೈಟ್ ಚಾಟ್ನಲ್ಲಿ ಭಾಗಿಯಾಗಿದ್ದ ವೇಳೆ ಈ ಮಾಹಿತಿ ಹೊರಹಾಕಿದ್ದಾರೆ. ಟೂರ್ನಮೆಂಟ್ ವೇಳೆ ದೊಡ್ಡ ಮಟ್ಟದ ಜನಸಂದಣಿ ನಿಯಂತ್ರಣ ಮಾಡುವುದು ತುಂಬಾ ಕಷ್ಟ ಎಂದು ಆಸ್ಟ್ರೇಲಿಯಾ ಕ್ರೀಡಾ ಮಂತ್ರಿ ಹೇಳಿದ್ದಾಗಿ ಅವರು ತಿಳಿಸಿದರು. ಪ್ರಪಂಚದಾದ್ಯಂತ ಕೋವಿಡ್-19 ಅಬ್ಬರ ಜೋರಾಗಿರುವ ಕಾರಣ ಯಾವುದೇ ಕ್ರೀಡಾಚಟುವಟಿಕೆ ನಡೆಯುತ್ತಿಲ್ಲ. ಹೀಗಾಗಿ ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಕೂಡ ಮುಂದೂಡಿಕೆಯಾಗಿದೆ.
ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ಆಸ್ಟ್ರೇಲಿಯಾದಲ್ಲಿ ಐಸಿಸಿ ಟಿ-20 ವಿಶ್ವಕಪ್ ಟೂರ್ನಮೆಂಟ್ ಆಯೋಜನೆಗೊಂಡಿದ್ದು, ಅದು ಮುಂದೂಡಿಕೆಯಾಗುವುದು ಬಹುತೇಕ ಖಚಿತ ಎಂಬ ಮಾತುಗಳು ಕೇಳಿ ಬಂದಿವೆ.
ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗಿಯಾಗಲು ಎಲ್ಲ ದೇಶದ ತಂಡಗಳು ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಬೇಕಾದ ಅನಿವಾರ್ಯತೆ ನಿರ್ಮಾಣಗೊಳ್ಳುವುದರಿಂದ ಕೋವಿಡ್-19 ಹಬ್ಬುವ ಸಾಧ್ಯತೆ ಹೆಚ್ಚಾಗಿರುತ್ತದೆ ಎಂಬ ಮಾತು ಕೇಳಿ ಬರುತ್ತಿದ್ದು, ಪಂದ್ಯ ನೋಡಲು ಬರುವ ವೀಕ್ಷಕರಲ್ಲಿ ಇದರ ಗುಣಲಕ್ಷಣಗಳಿದ್ದರೆ ಮತ್ತಷ್ಟು ಕಠಿಣ ಸ್ಥಿತಿ ನಿರ್ಮಾಣಗೊಳ್ಳುವ ಸಾಧ್ಯತೆ ಇರುತ್ತದೆ ಎನ್ನಲಾಗಿದೆ.
ಇನ್ನು ಐಸಿಸಿ ವಿಶ್ವಕಪ್ ಟಿ-20 ಕ್ರೀಡಾಭಿಮಾನಿಗಳು ಇಲ್ಲದೇ ನಡೆಸಬೇಕು ಎಂಬ ಮಾತುಗಳು ಕೇಳಿ ಬರುತ್ತಿದ್ದು, ಅದಕ್ಕೆ ಈಗಾಗಲೇ ವಿರಾಟ್ ಕೊಹ್ಲಿ ಸೇರಿದಂತೆ ಅನೇಕ ಪ್ಲೇಯರ್ಸ್ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಎಲ್ಲ ಬೆಳವಣಿಗೆ ನೋಡಿದರೆ ಪ್ರಸಕ್ತ ವರ್ಷ ನಡೆಯುವ ಟಿ-20 ವಿಶ್ವಕಪ್ ಮುಂದೂಡಿಕೆಯಾಗುವುದು ಬಹುತೇಕ ಖಚಿತವಾಗಿದೆ.