ನವದೆಹಲಿ: ಹೆಣ್ಣುಮಕ್ಕಳು ತಂದೆಯ ಆಸ್ತಿಯಲ್ಲಿ ಸಮಾನ ಹಕ್ಕು ಪಡೆಯಬಹುದಾಗಿದೆ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ.
ಹಿಂದೂ ಉತ್ತರಾಧಿಕಾರಿ (ತಿದ್ದುಪಡಿ) ಕಾಯಿದೆ-2005 ಜಾರಿಗೆ ಬರುವ ವೇಳೆ ತಂದೆಯಾಗಲಿ, ಮಗಳಾಗಲಿ ಬದುಕಿದ್ದರೇ ಅಥವಾ ನಿಧನ ಹೊಂದಿದ್ದರೇ ಅನ್ನೋದು ಇಲ್ಲಿ ಪರಿಗಣನೆಗೆ ಬರುವುದಿಲ್ಲ ಎಂದು ನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ, ನ್ಯಾ. ಎಸ್. ನಜೀರ್ ಮತ್ತು ನ್ಯಾ. ಎಮ್ಆರ್ ಷಾ ನೇತೃತ್ವದ ತ್ರಿಸದಸ್ಯ ಪೀಠ ಹೇಳಿದೆ.
ಹಿಂದೂ ಉತ್ತರಾಧಿಕಾರ ಕಾಯ್ದೆ- 1956 ರ ಬದಲಿ ಸೆಕ್ಷನ್ 6ರಲ್ಲಿರುವ ನಿಬಂಧನೆಗಳನ್ನು ತಿದ್ದುಪಡಿ ಮಾಡಿದ್ದು, ಇದರ ಮುಂಚಿತವಾಗಿ ಅಥವಾ ನಂತರ ಜನಿಸಿದ ಮಗಳಿಗೆ, ಮಗನಂತೆಯೇ ಸಮಾನ ಆಸ್ತಿಯ ಹಕ್ಕನ್ನು ಹೊಂದುವ ಅಧಿಕಾರವಿದೆ ಎಂದು ಕೋರ್ಟ್ ಹೇಳಿದೆ.
'ಕೋಪಾರ್ಸೆನರ್' ಎನ್ನುವುದು ಜನ್ಮದಿಂದ ಮಾತ್ರ ಪೋಷಕರ ಆಸ್ತಿಯಲ್ಲಿ ಕಾನೂನುಬದ್ಧ ಹಕ್ಕನ್ನು ಪಡೆದುಕೊಳ್ಳುವ ವ್ಯಕ್ತಿಗೆ ಬಳಸುವ ಪದ. 2005 ರ ಸೆಪ್ಟೆಂಬರ್ 9 ರಂದು ಹಿಂದೂ ಉತ್ತರಾಧಿಕಾರಿ ತಿದ್ದುಪಡಿ ಕಾಯಿದೆ ಜಾರಿಗೆ ಬಂದ ವೇಳೆ ತಂದೆ ಮತ್ತು ಮಗಳು ಇಬ್ಬರೂ ಜೀವಂತವಾಗಿದ್ದರೆ ಮಾತ್ರ ಆಕೆಗೆ ಈ ಹಕ್ಕು ಸಿಗುತ್ತದೆ ಎಂಬ ಈ ಹಿಂದಿನ ನಿರ್ಧಾರಗಳನ್ನು ಇದು ರದ್ದುಗೊಳಿಸುತ್ತದೆ.