ಅಹಮದಾಬಾದ್:ವಿವಾದಿತ ಸ್ವಯಂಘೋಷಿತ ಸ್ವಾಮೀಜಿ ನಿತ್ಯಾನಂದನ ವಿರುದ್ಧ ದೂರು ದಾಖಲಾಗಿದೆ. ಪ್ರಕರಣ ಸಂಬಂಧ ಸದ್ಯ ನಿತ್ಯಾನಂದನ ಇಬ್ಬರು ಮಹಿಳಾ ಅನುಯಾಯಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಸಾಧ್ವಿ ಪ್ರಾಣಪ್ರಿಯಾನಂದ ಹಾಗೂ ಪ್ರಿಯತತ್ವ ರಿದ್ಧಿಕಿರಣ್ ಹೆಸರಿನ ಸ್ವಾಮಿಯ ಇಬ್ಬರು ಅನುಯಾಯಿಗಳು ಕೇಸ್ನಲ್ಲಿ ಜೈಲುಪಾಲಾಗಿದ್ದಾರೆ. ಸದ್ಯ ಮಕ್ಕಳಿಬ್ಬರನ್ನು ಸುರಕ್ಷಿತವಾಗಿ ರಕ್ಷಣೆ ಮಾಡಿ ಮಕ್ಕಳ ಕಲ್ಯಾಣ ಇಲಾಖೆ ಸುಪರ್ದಿಗೆ ನೀಡಿದ್ದಾರೆ. ರಕ್ಷಿಸಲಾದ ಮಕ್ಕಳಿಬ್ಬರನ್ನು ಒತ್ತಾಯಪೂರ್ವಕವಾಗಿ ಧಾರ್ಮಿಕ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಮಾಡಲಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ ತಮ್ಮಿಬ್ಬರು ಮಕ್ಕಳನ್ನು ಒತ್ತೆಯಾಳಾಗಿರಿಸಿದ ಬಗ್ಗೆ ಜನಾರ್ದನ ಶರ್ಮಾ ಹಾಗೂ ಆತನ ಪತ್ನಿ ಗುಜರಾತ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
2013ರಲ್ಲಿ ಜನಾರ್ದನ ಶರ್ಮಾರ 7-15 ವಯಸ್ಸಿನ ನಾಲ್ವರು ಹೆಣ್ಣುಮಕ್ಕಳನ್ನು ಬೆಂಗಳೂರಿನಲ್ಲಿ ನಿತ್ಯಾನಂದ ಒಡೆತನ ಶಿಕ್ಷಣ ಸಂಸ್ಥೆಯಲ್ಲಿ ಸೇರಿಸಲಾಗಿತ್ತು. ಸದ್ಯ ಇವರನ್ನು ಅಹಮದಾಬಾದ್ನಲ್ಲಿರುವ ನಿತ್ಯಾನಂದ ಧ್ಯಾನಪೀಠಕ್ಕೆ ವರ್ಗಾಯಿಸಲಾಗಿದೆ.
ಈ ವರ್ಗಾವಣೆ ಗಮನಕ್ಕೆ ಬಂದ ತಕ್ಷಣ ಜನಾರ್ದನ ಹಾಗೂ ಆತನ ಪತ್ನಿ ತಮ್ಮ ಮಕ್ಕಳನ್ನು ನೋಡಲು ಮುಂದಾಗಿದ್ದಾರೆ. ಆದರೆ ಸಂಸ್ಥೆಯ ಅಧಿಕಾರಿಗಳು ಭೇಟಿಗೆ ನಿರಾಕರಿಸಿದರು ಎಂದು ಕೋರ್ಟ್ನಲ್ಲಿ ಹೇಳಿದ್ದಾರೆ.
ಪೊಲೀಸರ ಸಹಾಯದಿಂದ ಶಿಕ್ಷಣ ಸಂಸ್ಥೆಗೆ ತೆರಳಿದ ಜನಾರ್ದನ ಶರ್ಮಾ ದಂಪತಿ ಇಬ್ಬರು ಅಪ್ರಾಪ್ತ ಹೆಣ್ಣುಮಕ್ಕಳನ್ನು ಮನೆಗೆ ಕರೆತಂದಿದ್ದಾರೆ. ಆದರೆ ಇನ್ನುಳಿದ ಇಬ್ಬರು ಮಕ್ಕಳಾದ ಲೋಪಾಮುದ್ರಾ(21) ಹಾಗೂ ನಂದಿತಾ(18) ಹೆತ್ತವರೊಂದಿಗೆ ಬರಲೊಪ್ಪಲಿಲ್ಲ ಎಂದು ಗುಜರಾತ್ ಹೈಕೋರ್ಟ್ನಲ್ಲಿ ಹೇಳಿದ್ದಾರೆ. ನಂದಿತಾ ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ದೂರು ದಾಖಲಿಸಿದ್ದಾರೆ. ನಂತರದಲ್ಲಿ ವಿಡಿಯೋ ಕಾಲ್ ಮೂಲಕ ನಂದಿತಾ ತಾನು ಆಶ್ರಮದಲ್ಲೇ ಉಳಿಯಲಿಚ್ಛಿಸುವುದಾಗಿ ಸ್ಪಷ್ಟನೆ ನೀಡಿದ್ದಾರೆ.
ಅಪ್ರಾಪ್ತರನ್ನು ಎರಡೂ ವಾರಕ್ಕೂ ಹೆಚ್ಚು ಸಮಯ ಕೂಡಿಹಾಕಿದ್ದಲ್ಲದೆ, ನಿದ್ದೆಗೂ ಅವಕಾಶ ನೀಡಿಲ್ಲ ಎಂದು ಜನಾರ್ದನ ಶರ್ಮಾ ಪೊಲೀಸ್ ದೂರು ನೀಡಿದ್ದಾರೆ.