ಗುಂಟೂರು: ನಾಲ್ಕು ವರ್ಷದ ಮಗಳು ಬಾವಿಯಲ್ಲಿ ಬಿದ್ದಿದ್ದು, ಪೋಷಕರು ಕಾಪಾಡಲು ಸಾಧ್ಯವಾಗದೇ ಆ ಮಗು ಸಾವನ್ನಪ್ಪಿರುವ ಘಟನೆ ಗುಂಟೂರು ಜಿಲ್ಲೆಯ ಮಾಚರ್ಲ ತಾಲೂಕಿನಲ್ಲಿ ನಡೆದಿದೆ.
ವಲತೋಟಿ ಅಚ್ಚಿಬಾಬು, ಅನೂಷಾ ದಂಪತಿಗೆ ಸರಸ್ವತಿ (4) ಮತ್ತು ಮಹಾಲಕ್ಷ್ಮೀ (2) ಎಂಬ ಎರಡು ಹೆಣ್ಮಕ್ಕಳಿದ್ದರು. ಕುಟುಂಬದಲ್ಲಿ ಕಲಹಗಳಾಗುತ್ತಿದ್ದು, ಮನೆ ಶಾಂತಿಗಾಗಿ ಶಿವಾರು ಗ್ರಾಮದ ಬುಗ್ಗ ಮಲ್ಲಯ್ಯಸ್ವಾಮಿ ದೇವಸ್ಥಾನಕ್ಕೆ ತೆರಳಿದ್ದರು. ಈ ವೇಳೆ ಸರಸ್ವತಿ ಆಟವಾಡುತ್ತ ದೇವಸ್ಥಾನದ ಬಳಿಯಿರುವ ಬಾವಿಗೆ ಬಿದ್ದಿದ್ದಾಳೆ. ಬಾವಿಯಲ್ಲಿ ಬಿದ್ದ ಸರಸ್ವತಿ ಅಪ್ಪ-ಅಮ್ಮಾ ಕಾಪಾಡಿ ಎಂದು ಕೂಗಿದ್ದಾಳೆ.
ಬಾವಿಯಿಂದ ಮಗಳ ಶಬ್ದ ಕೇಳಿದ ತಾಯಿ - ತಂದೆ ಸಹಾಯಕ್ಕೆ ದೌಡಾಯಿಸಿದ್ದಾರೆ. ಆದ್ರೆ ಇಬ್ಬರಿಗೂ ಈಜು ಬಾರದೇ ಬಾವಿ ಮೇಲಿಂದ ಮಗಳನ್ನು ಕಾಪಾಡಲು ಅನೇಕ ಪ್ರಯತ್ನ ಮಾಡಿದ್ದಾರೆ. ಆದರೂ ಯಾವುದೇ ಪ್ರಯೋಜನವಾಗಲಿಲ್ಲ. ಮಗು ತಂದೆ-ತಾಯಿ ಎದುರೇ ನೀರಿನಲ್ಲಿ ಮುಳುಗಿದೆ. ಸ್ಥಳೀಯರ ಸಹಾಯದಿಂದ ಮಗುವನ್ನು ನೀರಿನಿಂದ ಹೊರ ತೆಗೆದರು. ಅಷ್ಟೋತ್ತಿಗಾಗಲೇ ಮಗು ಸಾವನ್ನಪ್ಪಿತ್ತು. ಮಗಳನ್ನು ಕಾಪಾಡಲು ಸಾಧ್ಯವಾಗದೇ ಕರುಳಬಳ್ಳಿ ಕಳೆದುಕೊಂಡಿರುವ ಆ ತಂದೆ-ತಾಯಿಯ ರೋದನೆ ಮುಗಿಲು ಮುಟ್ಟಿತ್ತು.
ಈ ಘಟನೆ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆ ಬಗ್ಗೆ ಮಗುವಿನ ಪೋಷಕರನ್ನ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.