ಹೈದಾರಾಬಾದ್:ವೈದ್ಯಕೀಯ ಕ್ಷೇತ್ರದಲ್ಲಿ ಎಂದಿಗೂ ಸವಾಲುಗಳು ಇದ್ದೇ ಇರುತ್ತವೆ. ಹೊಸ ರೋಗಗಳು ಪತ್ತೆಯಾಗುತ್ತಲೇ ಇರುವತ್ತವೆ. ಅದಕ್ಕೆ ಹೊಸದಾಗಿ ಔಷಧಿಗಳನ್ನು ಕಂಡು ಹಿಡಿಯುತ್ತಲೇ ಇರಬೇಕು. ಆದ್ರೆ ಕೆಲ ರೋಗಗಳಿಗೆ ಸೂಕ್ತ ಔಷಧಿ ಸಿಗುವುದಿಲ್ಲ. ಇದು ವೈದ್ಯಕೀಯ ಲೋಕಕ್ಕೆ ಸವಾಲಿನದ್ದಾಗಿರುತ್ತದೆ. ಇದರಲ್ಲಿ ಸಂಕ್ರಾಮಿಕ ರೋಗಳು ಅತಿ ಮುಖ್ಯವಾಗಿವೆ. ಚಿಕಿತ್ಸೆ, ವ್ಯಾಕ್ಸಿನ್‌ಗಳನ್ನು ಕಂಡು ಹಿಡಿಯುವ ವೇಳೆಗೆ ಮಹಾಮಾರಿ ರೋಗಗಳು ಅಪಾರ ನಷ್ಟ ಉಂಟು ಮಾಡಿರುತ್ತವೆ.
ಪ್ರಸ್ತುತ ಹೊಸದಾಗಿ ಪತ್ತೆಯಾಗುವ ರೋಗಗಳಿಗೆ ಔಷಧಿ ಕಂಡುಹಿಡಿಯುವುದು ಕಷ್ಟದ ಕೆಲಸವೇನಲ್ಲ. ಸ್ವಲ್ಪ ತಡವಾದ್ರೂ ಖಚಿತವಾಗಿ ಔಷಧಿ ಕಂಡುಹಿಡಿಯಲಾಗುತ್ತದೆ. ಕೊರೊನಾ ವೈರಸ್ ವಿಷಯದಲ್ಲೂ ಅದೇ ಆಗುತ್ತಿದೆ. ಕೋವಿಡ್ ವೈರಸ್ ಪತ್ತೆಯಾದಾಗಿನಿಂದಲೂ ಇದನ್ನು ಮಟ್ಟಹಾಕಲು ಸಂಶೋಧನೆಗಳು ನಡೆಯುತ್ತಿವೆ. ಕೆಲ ಸಂಸ್ಥೆಗಳು ಕ್ಲಿನಿಕ್‌ಗಳಲ್ಲಿ ಪ್ರಯೋಗಳನ್ನು ಮಾಡಿವೆ. ಆದ್ರೆ ಸಂಪೂರ್ಣವಾಗಿ ಗುಣಮುಖವಾಗುವಂತ ಔಷಧಿ ಕಂಡು ಹಿಡಿಯಬೇಕಾದರೆ ಕನಿಷ್ಠ 18 ತಿಂಗಳು ಹಿಡಿಯಲಿದೆ ಅಂತಿದ್ದಾರೆ ತಜ್ಞರು.
ಬಂದು ಹೋದ ಮಹಾಮಾರಿಗಳು..
ಇಂತಹ ಆಧುನಿಕ ಜ್ಞಾನ ಇರುವ ದಿನಗಳಲ್ಲಿ ವ್ಯಾಕ್ಸಿನ್ ತರಲು ಇಷ್ಟು ತಿಂಗಳು ಹಿಡಿಯುತ್ತವೆ. ಆದ್ರೆ ಸೂಕ್ತ ವೈದ್ಯಕೀಯ ಸೌಕರ್ಯಗಳು ಇಲ್ಲದ ಅಂದಿನ ದಿನಗಳಲ್ಲಿ ಪರಿಸ್ಥಿತಿ ಹೇಗಿತ್ತು ಎಂಬುದನ್ನು ಅರ್ಥ ಮಾಡಿಕೊಳ್ಳಬಹುದು. ತಜ್ಞ ವೈದ್ಯರು, ಸಂಶೋಧನೆ ಇಲ್ಲದ ಕಾಲದಲ್ಲೇ ಬಂದಿದ್ದ ಜಸ್ಟಿನಿಯನ್ ಪ್ಲೇಗು, ಬುಬೋನಿಕ್ ಪ್ಲೇಗು, ದಿ ಗ್ರೇಟ್ ಪ್ಲೇಗ್ ಆಫ್ ಲಂಡನ್, ಸಿಡುಬು, ಕಾಲರಾ ನಂತಹ ಮಹಾಮಾರಿ ರೋಗಗಳು ವರ್ಷಗಳ ಕಾಲ ವಿಶ್ವವನ್ನು ಹಿಂಡಿ ಹಿಪ್ಪೆ ಮಾಡಿ ಅಷ್ಟೇ ವೇಗವಾಗಿ ಕಣ್ಮರೆಯಾದವು. ಇದಕ್ಕೆ ಪ್ರಮುಖ ಕಾರಣಗಳು ರೋಗನಿರೋಧಕ ಶಕ್ತಿ ಹೆಚ್ಚಿಸುವ ಔಷಧಿಗಳ ಹೆಚ್ಚಳ ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಂಡಿರುವುದು.
ಪ್ಲೇಗ್‌ನ ಅಬ್ಬರ ಹೇಗಿತ್ತು?
ಇತಿಹಾಸದಲ್ಲಿ ಅತಿ ಭಯಂಕರವಾದ ರೋಗಗಳಲ್ಲಿ ಪ್ಲೇಗು ಒಂದು. ಇದು ಕ್ರಿ.ಶ 541ರಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿತು. ಆಸ್ಟ್ರೇಲಿಯಾ, ಉತ್ತರ ಅಮೆರಿಕಾ, ಅರೇಬಿಯಾ ದೇಶದಲ್ಲಿ ವ್ಯಾಪಿಸಿತ್ತು. ಅಂದು ಈ ರೋಗಕ್ಕೆ ಸೂಕ್ತ ಔಷಧಿ ಇಲ್ಲದ ಕಾರಣ ವಿಶ್ವದಾದ್ಯಂತ ಸುಮಾರು 3 ರಿಂದ 5 ಕೋಟಿ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂಬ ಮಾಹಿತಿ ಇದೆ. ಕ್ರಿ.ಶ 750ರ ವರೆಗೆ ಪ್ಲೇಗು ರೌದ್ರನರ್ತನ ಮಾಡಿದೆ. ಬಳಿಕ ಕಣ್ಮರೆ ಆಯಿತು. ರೋಗ ನಿರೋಧಕ ಶಕ್ತಿಯ ಸಾಮರ್ಥ್ಯ ಹೆಚ್ಚಾಗಿದ್ದವರು ಸಾವಿನ ದವಡೆಯಿಂದ ಬಚಾವ್ ಆಗಿದ್ದಾರೆ ಅನ್ನೋದು ಕೂಡ ಇತಿಹಾಸಕಾರರ ಅಭಿಪ್ರಾಯವಾಗಿದೆ.
ಬ್ಲಾಕ್‌ಡೆತ್ ಮಹಾಮಾರಿ
ಬ್ಲಾಕ್‌ಡೆತ್ ಅಂತಲೇ ಕರೆಯುವ ಬುಬೋನಿಕ್ ಪ್ಲೇಗು 1347ರಲ್ಲಿ ಕಾಣಿಸಿಕೊಂಡಿತ್ತು. ಯೂರೋಪ್‌ನಾದ್ಯಂತ ಹರಡಿದ್ದ ರೋಗ, ನಾಲ್ಕು ವರ್ಷಗಳಲ್ಲಿ ಕೋಟಿ ಕೋಟಿ ಜನರನ್ನು ಬಲಿ ಪಡೆದಿತ್ತು. ಈ ರೋಗವನ್ನು ಹೇಗೆ ನಾಶ ಮಾಡಬೇಕು ಎಂದು ತಿಳಿಯದಿದ್ದರೂ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಎಂಬುದು ಗೊತ್ತಾದ ಕೂಡಲೇ ಜನರು, ರೋಗಿಗಳನ್ನು ಐಸೋಲೇಷನ್ ಮಾಡಲು ಆರಂಭಿಸಿದ್ದರು. ಹಡಗುಗಳ ಮೂಲಕ ಬಂದಿದ್ದವರನ್ನು 40 ದಿನಗಳ ಕಾಲ ಕ್ವಾರಂಟೈನ್ ಮಾಡಿದ ನಂತರ ಅವರಿಗೆ ರೋಗದ ಲಕ್ಷಣಗಳು ಇಲ್ಲ ಎಂಬುದು ಖಾತ್ರಿಯಾದ ಬಳಿಕವಷ್ಟೇ ರಾಜ್ಯಗಳ ಒಳಗೆ ಪ್ರವೇಶ ಮಾಡಲು ಅನುಮತಿ ನೀಡಲಾಗಿತ್ತು. ಮೊದಲೇ ಜಾಗೃತಗೊಂಡವರು ಬ್ಲಾಕ್‌ಡೆತ್ ಮಹಾಮಾರಿಯ ಸಾವಿನ ದವಡೆಯಿಂದ ಪಾರಾಗಿದ್ದರು.