ಗಾಂಧಿನಗರ:ಗುಜರಾತ್ಗೆ ಅಪ್ಪಳಿಸಲಿದ್ದ ವಾಯು ಚಂಡಮಾರುತದ ಆತಂಕದ ನಡುವೆಯೇ ಎನ್ಡಿಆರ್ಎಫ್ ಗರ್ಭಿಣಿಯನ್ನು ರಕ್ಷಿಸಿ ಮಾನವೀಯತೆ ಮೆರೆದಿರುವ ಘಟನೆ ನಡೆದಿದೆ.
ಚಂಡಮಾರುತ ಸೃಷ್ಟಿಸಲಿದ್ದ ಅನಾಹುತಗಳಿಂದ ಜನರನ್ನು ಪಾರು ಮಾಡಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಸನ್ನದ್ಧವಾಗಿತ್ತು. ಈ ಮಧ್ಯೆ ಅಮ್ರೇಲಿ ಬಂದರಿನಿಂದ 700 ಮೀಟರ್ ದೂರದ ಶಿಯಾಲ್ ಬೆಟ್ ದ್ವೀಪದಲ್ಲಿದ್ದ ಗರ್ಭಿಣಿ ಹನ್ಸ್ಬೆನ್ ಅವರಿಗೆ ಪ್ರಸವ ಪೂರ್ವ ತುರ್ತು ಚಿಕಿತ್ಸೆ ಅಗತ್ಯವಿತ್ತು. ಎನ್ಡಿಆರ್ಎಫ್ನ 5ನೇ ಬೆಟಾಲಿಯನ್ ಪಡೆ ಆಕೆಯನ್ನು ರಕ್ಷಿಸಿ, ಜಫರಾಬಾದ್ ಆಸ್ಪತ್ರೆಗೆ ದಾಖಲಿಸಿದೆ.
ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ರವಾನಿಸಿದ್ದರಿಂದ ಯಾವುದೇ ತೊಂದರೆಯಿಲ್ಲದೆ ಮಹಿಳೆಗೆ ಹೆರಿಗೆಯಾಗಿದೆ. ಆಕೆ ಗಂಡು ಮಗುವಿಗೆ ಜನ್ಮ ನೀಡಿದ್ದು, ತಾಯಿ-ಮಗು ಇಬ್ಬರೂ ಸುರಕ್ಷಿತವಾಗಿದ್ದಾರೆ.
ಇನ್ನು, ಜುನಾಗಢ ಜಿಲ್ಲೆಯ ಮಾಲಿಯಾ ಎಂಬಲ್ಲಿ 108 ಆ್ಯಂಬುಲೆನ್ಸ್ ಸಿಬ್ಬಂದಿಯೇ ಮಹಿಳೆಗೆ ಹೆರಿಗೆ ಮಾಡಿಸಿದ ಘಟನೆಯೂ ನಡೆದಿದೆ. ವಾಯು ಚಂಡಮಾರುತಕ್ಕೆ ತುತ್ತಾದ ಪ್ರದೇಶಗಳಲ್ಲಿ 15 ಗರ್ಭಿಣಿಯರನ್ನು ಆಸ್ಪತ್ರೆಗೆ ರವಾನಿಸಲಾಗಿತ್ತು. ಈ ಪೈಕಿ ನಾಲ್ಕು ಮಹಿಳೆಯರಿಗೆ ಯಾವುದೇ ತೊಂದರೆಯಿಲ್ಲದೆ ಹೆರಿಗೆಯಾಗಿದೆ.
ವಾಯು ಚಂಡಮಾರುತ ತನ್ನ ಪಥ ಬದಲಿಸಿದ್ದರೂ ರಾಜ್ಯ ಸರ್ಕಾರ ಮಾತ್ರ ಮುಂಜಾಗ್ರತ ಕ್ರಮಗಳನ್ನು ಕೈಗೊಂಡಿತ್ತು. ತಗ್ಗು ಪ್ರದೇಶಗಳಲ್ಲಿದ್ದ 3 ಲಕ್ಷ ಜನರನ್ನು ಸ್ಥಳಾಂತರ ಮಾಡಲಾಗಿದೆ. ವಿಮಾನ ನಿಲ್ದಾಣಗಳನ್ನು ಬಂದ್ ಮಾಡಿ, 70 ರೈಲುಗಳನ್ನು ರದ್ದು ಮಾಡಿ ಅಗತ್ಯ ಕ್ರಮ ಕೈಗೊಂಡಿತ್ತು. ಇದೀಗ ನಿಧಾನವಾಗಿ ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ.