ತಿರುವನಂತಪುರಂ: ಬುರೆವಿ ಚಂಡಮಾರುತವು ಪಶ್ಚಿಮ-ವಾಯುವ್ಯ ದಿಕ್ಕಿನಲ್ಲಿ ಚಲಿಸುವ ಸಾಧ್ಯತೆಯಿd, ಬೆಳಗ್ಗೆ ಮನ್ನಾರ್ ಕೊಲ್ಲಿ ಮತ್ತು ಪಕ್ಕದ ಕೊಮೊರಿನ್ ಪ್ರದೇಶದಲ್ಲಿ ಆರ್ಭಟಿಸಲಿದೆ ಎಂದು ಚೆನ್ನೈನ ಪ್ರಾದೇಶಿಕ ಹವಾಮಾನ ಕೇಂದ್ರ ತಿಳಿಸಿದೆ.
ಕಳೆದ ಆರು ಗಂಟೆಗಳಲ್ಲಿ 12 ಕಿ.ಮೀ ವೇಗದಲ್ಲಿ ಶ್ರೀಲಂಕಾದಿಂದ ಪಶ್ಚಿಮ-ವಾಯುವ್ಯ ದಿಕ್ಕಿಗೆ ಚಂಡಮಾರುತ ಸಾಗುತ್ತಿದೆ. ಶ್ರೀಲಂಕಾ ಕರಾವಳಿ ಪ್ರದೇಶ ತ್ರೀನ್ಕೊಮಾಲಿಯಿಂದ ವಾಯುವ್ಯಕ್ಕೆ 60 ಕಿ.ಮೀ ಮತ್ತು ಭಾರತದ ಪಂಬನ್ನ ಪೂರ್ವ-ಆಗ್ನೇಯಕ್ಕೆ 180 ಕಿ.ಮೀ. ದೂರದಲ್ಲಿ ಕೇಂದ್ರೀಕೃತವಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ತಿರುವನಂತಪುರಂ, ಕೊಲ್ಲಂ, ಪಥನಮತ್ತಟ್ಟ, ಮತ್ತು ಆಲಪ್ಪುಳ ಜಿಲ್ಲೆಗಳಲ್ಲಿ ತೀವ್ರ ಮಳೆಯಾಗುವ ನಿರೀಕ್ಷೆಯಿದ್ದು, ಭಾರತೀಯ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ.
ಈಗಾಗಲೇ ಎನ್ಡಿಆರ್ಎಫ್ನ ಎಂಟು ತಂಡಗಳು ಮತ್ತು ವಾಯುಪಡೆ ಮತ್ತು ನೌಕಾಪಡೆಯ ಸಿಬ್ಬಂದಿಯನ್ನು ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಾಗಿ ನಿಯೋಜಿಸಲಾಗಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಬುಧವಾರ ಹೇಳಿದ್ದಾರೆ. ಅಲ್ಲದೆ ಚಂಡಮಾರುತದ ದೃಷ್ಟಿಯಿಂದ, 175 ಕುಟುಂಬಗಳ 697 ಜನರನ್ನು ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ ಎಂದಿದ್ದಾರೆ.
ಬುಧವಾರ, ಪ್ರಧಾನಿ ನರೇಂದ್ರ ಮೋದಿ ಅವರು ಪಿಣರಾಯಿ ವಿಜಯನ್ ಅವರೊಂದಿಗೆ ಚರ್ಚಿಸಿದ್ದಾರೆ. ಚಂಡಮಾರುತ ಎದುರಿಸಲು ರಾಜ್ಯವು ಮಾಡಿರುವ ವ್ಯವಸ್ಥೆಗಳ ಬಗ್ಗೆ ಕೇರಳ ಸಿಎಂ ಅವರು ಪ್ರಧಾನಿಗೆ ಮಾಹಿತಿ ನೀಡಿದ್ದಾರೆ.