ಕೋಲ್ಕತ್ತಾ(ಪಶ್ಚಿಮ ಬಂಗಾಳ): ರಕ್ಕಸ ಅಂಫಾನ್ ಚಂಡಮಾರುತ ಪಶ್ಚಿಮ ಬಂಗಾಳಕ್ಕೆ ಅಪ್ಪಳಿಸಿದ್ದು, ಇಲ್ಲಿಯವರೆಗೆ 4 ಜನರನ್ನು ಬಲಿ ಪಡೆದುಕೊಂಡಿದೆ.
ಭಾರಿ ಗಾಳಿ ಮತ್ತು ಮಳೆಗೆ ಬಸಿರ್ಹತ್ ಪ್ರದೇಶದಲ್ಲಿ ಈವರೆಗೆ ಸುಮಾರು 55,500 ಗುಡಿಸಲುಗಳು ನಾಶವಾಗಿವೆ. ಪಶ್ಚಿಮ ಬಂಗಾಳದ ಡಮ್ ಡುಮ್ ನಗರದಲ್ಲಿ 130 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದೆ.
ಉತ್ತರ 24 ಪರಗಣದಲ್ಲಿ 2 ಮತ್ತು ಹೌರಾದಲ್ಲಿ ಒಂದು ಸಾವು ವರದಿಯಾಗಿದ್ದರೆ, ಒಡಿಶಾದಲ್ಲಿ ಮೂರು ತಿಂಗಳ ಮಗು ಸಾವಿಗೀಡಾಗಿದೆ. 24 ಪರಗಣದ ಬಸಿರ್ಹತ್ ಪ್ರದೇಶದ ಮಿನಾಖಾನ್ನಲ್ಲಿ ಮರವೊಂದು ಮೆನೆ ಮೇಲೆ ಬಿದ್ದ ಪರಿಣಾಮ ನೂರ್ಜಹಾನ್ ಬೇವಾ (56) ಎಂಬುವವರು ಸಾವಿಗೀಡಾಗಿದ್ದಾರೆ. ಬಸಿರ್ಹತ್‌ನ ಮಾಟಿಯಾ ಪ್ರದೇಶದಲ್ಲಿ ಮಹಂತ ದಾಸ್ ಎಂಬ ವ್ಯಕ್ತಿ ಮೇಲೆ ಮರ ಬಿದ್ದು ಸಾವಿಗೀಡಾಗಿದ್ದಾನೆ. ಇತ್ತ ಹೌರಾ ಜಿಲ್ಲೆಯ ಸಾಲ್ಕಿಯಾ ಪ್ರದೇಶದ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ.
ಪಶ್ಚಿಮ ಬಂಗಾಳದ ಪೂರ್ವ ಮಿಡ್ನಾಪುರ ಸೇರಿದಂತೆ ಹಲವೆಡೆ ಮರಗಳು ಧರೆಗುರುಳಿದ ಪರಿಣಾಮ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿದೆ. ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರು ನಬನ್ನಾ ನಿಯಂತ್ರಣ ಕೊಠಡಿಯಲ್ಲಿ ಕುಳಿತುಕೊಂಡು ಅಂಫಾನ್ ಪರಿಸ್ಥಿತಿಯ ಮೇಲ್ವಿಚಾರಣೆ ನಡೆಸುತ್ತಿದ್ದಾರೆ.