ಕೋಲ್ಕತ್ತಾ(ಪಶ್ಚಿಮ ಬಂಗಾಳ):ಕೊರೊನಾ ಆತಂಕದ ನಡುವೆಯೇ ಅಂಫಾನ್ ಚಂಡಮಾರುತದ ರುದ್ರ ನರ್ತನ ಆರಂಭವಾಗಿದೆ. ಭಯಂಕರ ಸ್ವರೂಪ ಪಡೆದುಕೊಂಡಿರುವ ಅಂಫಾನ್ ಚಂಡಮಾರುತ ಮಧ್ಯಾಹ್ನ 2:30ರಿಂದಲೇ ಅಬ್ಬರಿಸುತ್ತಿದೆ.
ಪೂರ್ವ ಕರಾವಳಿಗೆ ಅಪ್ಪಳಿಸಿದ ಅಂಫಾನ್.. ಒಡಿಶಾದಿಂದ ಪಶ್ಚಿಮ ಬಂಗಾಳದತ್ತ ಹೊರಟ ಡೆಡ್ಲಿ ಸೈಕ್ಲೋನ್ - ಅಂಫಾನ್ ಚಂಡಮಾರುತ ಲೇಟೆಸ್ಟ್ ನ್ಯೂಸ್
ರಣಭೀಕರ ಅಂಫಾನ್ ಚಂಡಮಾರುತದಿಂದಾಗಿ ಒಡಿಶಾ, ಪಶ್ಚಿಮ ಬಂಗಾಳ ಕರಾವಳಿಯಲ್ಲಿ ಭಾರೀ ಮಳೆ ಸುರಿಯುತ್ತಿದೆ. ಆಕಾಶವನ್ನು ಆವರಿಸಿರುವ ಕಪ್ಪಗಿನ ಮೋಡಗಳು ಜನರಲ್ಲಿ ಭೀತಿ ಹುಟ್ಟಿಸುತ್ತಿವೆ. ಸಮುದ್ರದ ಅಲೆಗಳ ಏರಿಳಿತ ಹೆಚ್ಚಾಗಿದ್ದು ಕರಾವಳಿಯಲ್ಲಿ ಆತಂಕ ಸೃಷ್ಟಿಸಿದೆ.
ಮುಂದಿನ ನಾಲ್ಕು ಗಂಟೆಯವರೆಗೂ ಚಂಡಮಾರುತದ ಮಹಾ ಅಬ್ಬರ ಇರಲಿದೆ. ಪಶ್ಚಿಮ ಬಂಗಾಳ, ಒಡಿಶಾ ಕರಾವಳಿಯಲ್ಲಿ ಭಯಂಕರ ಗಾಳಿಯೊಂದಿಗೆ ಮಹಾಮಳೆ ಸುರಿಯುತ್ತಿದೆ. ಗಂಟೆಗೆ 180 ಕಿಲೋ ಮೀಟರ್ ವೇಗದಲ್ಲಿ ಗಾಳಿ ಬೀಸುತ್ತಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಅಂಫಾನ್ ಚಂಡಮಾರುತವು ಈಗಾಗಲೇ ಪಾರಾದೀಪ್ ಪ್ರದೇಶವನ್ನು ದಾಟಿದ್ದು, ಬಾಲಸೋರ್ಗೆ ಅಪ್ಪಳಿಸಲಿದೆ ಎಂದು ವಿಶೇಷ ಪರಿಹಾರ ಆಯುಕ್ತ ಪ್ರದೀಪ್ ಕುಮಾರ್ ಜೆನಾ ಹೇಳಿದ್ದಾರೆ.
ಚಂಡಮಾರುತದ ಅಪ್ಪಳಿಸುವುದಕ್ಕೂ ಮೊದಲು ಪಶ್ಚಿಮ ಬಂಗಾಳ ಮತ್ತು ಒಡಿಶಾದಿಂದ ಸುಮಾರು 4 ಲಕ್ಷದ 50 ಸಾವಿರ ಜನರನ್ನು ಸ್ಥಳಾಂತರಿಸಲಾಗಿದೆ. ಒಡಿಶಾದಿಂದ 1.20 ಲಕ್ಷ ಜನರನ್ನು ಸ್ಥಳಾಂತರ ಮಾಡಿದ್ರೆ, ಪಶ್ಚಿಮ ಬಂಗಾಳದಿಂದ 3.30 ಲಕ್ಷ ಜನರನ್ನು ಸ್ಥಳಾಂತರಿಸಲಾಗಿದೆ.