ಕೋಲ್ಕತ್ತಾ: ಅಂಫಾನ್ ಚಂಡಮಾರುತದಿಂದ ತತ್ತರಿಸಿರುವ ಪಶ್ಚಿಮ ಬಂಗಾಳದಲ್ಲಿ ಸಾವನ್ನಪ್ಪಿದವರ ಸಂಖ್ಯೆ 80ಕ್ಕೆ ಏರಿದೆ.
ಪಶ್ಚಿಮ ಬಂಗಾಳ ಹಾಗೂ ಒಡಿಶಾ ಈ ಎರಡೂ ರಾಜ್ಯಗಳಲ್ಲಿ ಚಂಡಮಾರುತವು ಅಪಾರ ಹಾನಿಯುಂಟು ಮಾಡಿದೆ. ಪಶ್ಚಿಮ ಬಂಗಾಳದ ವಿವಿಧ ಭಾಗಗಳಲ್ಲಿ ಗುರುವಾರ ರಾತ್ರಿಯಂದು ಐದು ಶವಗಳ ಅವಶೇಷಗಳನ್ನು ಹೊರತೆಗೆಯಲಾಗಿದೆ.
ಅಂಫಾನ್ ಚಂಡಮಾರುತದಿಂದಾಗಿ ಕೊಲ್ಕತಾ ಸೇರಿದಂತೆ ಪಶ್ಚಿಮ ಬಂಗಾಳದ 6ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಲಕ್ಷಾಂತರ ಜನರು ನಿರಾಶ್ರಿತರಾಗಿದ್ದಾರೆ. ಕೆಲವು ಭಾಗಗಳಲ್ಲಿ ವಿದ್ಯುತ್ ಮತ್ತು ಮೊಬೈಲ್ ಸಂಪರ್ಕವನ್ನು ಪುನಃಸ್ಥಾಪಿಸಲಾಗಿದ್ದರೂ, ವಿದ್ಯುತ್ ಕಂಬಗಳು ಹಾರಿಹೋಗುತ್ತಿವೆ.
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೊಂದಿಗೆ ಪ್ರಧಾನಿ ಮೋದಿ ಅವರು ಪಶ್ಚಿಮ ಬಂಗಾಳದ 'ಚಂಡಮಾರುತ ಪೀಡಿತ' ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿದರು.
ಟಿಎಂಸಿ ಮೂಲಗಳ ಪ್ರಕಾರ, ಮುಖ್ಯಮಂತ್ರಿ ರಾಜ್ಯಕ್ಕೆ ಹಣಕಾಸು ಪ್ಯಾಕೇಜ್ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗುತ್ತಿದೆ.
'ಕೋವಿಡ್-19ನಿಂದಾಗಿ ಸಂಕಷ್ಟದಲ್ಲಿರುವಾಗಲೇ ಈ ಚಂಡಮಾರುತದಿಂದ ಉಂಟಾದ ಹಾನಿಗೆ ಕೇಂದ್ರ ಸರ್ಕಾರವು ರಾಜ್ಯವನ್ನು ಪುನರ್ನಿರ್ಮಿಸಲು ಎಲ್ಲಾ ರೀತಿಯ ಸಹಾಯವನ್ನು ನೀಡುತ್ತದೆ' ಎಂದು ಟಿಎಂಸಿಯ ಹಿರಿಯ ಮುಖಂಡರೊಬ್ಬರು ಹೇಳಿದ್ದಾರೆ.
ಮೃತ ವ್ಯಕ್ತಿಯ ಕುಟುಂಬ ಸದಸ್ಯರಿಗೆ ತಲಾ 2 ಲಕ್ಷ ರೂ.ಗಳ ಪರಿಹಾರ ಮತ್ತು ಪೀಡಿತ ಪ್ರದೇಶಗಳ ಪ್ರಾಥಮಿಕ ಜೀರ್ಣೋದ್ಧಾರ ಕಾರ್ಯಕ್ಕಾಗಿ 1,000 ಕೋಟಿ ರೂ. ಕಾರ್ಪಸ್ ನಿಧಿಯನ್ನು ಬ್ಯಾನರ್ಜಿ ಗುರುವಾರ ಪ್ರಕಟಿಸಿದ್ದರು.
ಒಟ್ಟು ಸಾವುಗಳಲ್ಲಿ ಕೋಲ್ಕತ್ತಾದಿಂದ 19, ಉತ್ತರ 24 ಪರಗಣದಿಂದ 17, ದಕ್ಷಿಣ 24 ಪರಗಣ- ಸುಂದರ್‌ಬನ್ ಪ್ರದೇಶದ 14 ಮತ್ತು ಬಸಿರ್‌ಹತ್‌ನಿಂದ 10 ಮಂದಿ ಸೇರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲೆಗಳಲ್ಲಿ ಹಲವು ನಿರಾಶ್ರಿತರ ಶಿಬಿರಗಳನ್ನ ತೆರೆಯಲಾಗಿದೆ. ರಸ್ತೆಯಲ್ಲಿ ಬಿದ್ದು ಸಂಪರ್ಕ ತಡೆ ಉಂಟುಮಾಡಿರುವ ಮರಗಳನ್ನು ಎನ್‌ಡಿಆರ್‌ಎಫ್ ಮತ್ತು ರಾಜ್ಯ ವಿಪತ್ತು ಪರಿಹಾರ ಪಡೆ (ಎಸ್‌ಡಿಆರ್‌ಎಫ್) ತಂಡಗಳು ತೆರವುಗೊಳಿಸುತ್ತಿವೆ.
ಕೋಲ್ಕತ್ತಾದ ಸುತ್ತಮುತ್ತಲಿನ ಪ್ರದೇಶದಲ್ಲಿ 5,000ಕ್ಕೂ ಹೆಚ್ಚು ಮರಗಳು, ನೂರಾರು ವಿದ್ಯುತ್ ಕಂಬಗಳು, ಟ್ರಾಫಿಕ್ ಸಿಗ್ನಲ್‌ಗಳು ಮತ್ತು ಪೊಲೀಸ್ ಕಿಯೋಸ್ಕ್ಗಳು ಧರೆಗುರುಳಿವೆ ಎಂದು ಕೆಎಂಸಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.