ಹೈದರಾಬಾದ್: ಕೊರೊನಾ ವೈರಸ್ನಿಂದ ಜನರಲ್ಲಿ ಉಂಟಾಗಿರುವ ಭಯವನ್ನೇ ಸದುಪಯೋಗ ಪಡಿಸಿಕೊಂಡಿರುವ ಸೈಬರ್ ಲೋಕದ ಕುತಂತ್ರಿಗಳು, ಜನರ ಮೊಬೈಲ್ಗಳಿಗೆ ಫೇಕ್ ಲಿಂಕ್‌ಗಳನ್ನು ಕಳುಹಿಸುವ ಮೂಲಕ ಈ ರೋಗದ ಹೆಸರಿನಲ್ಲಿ ತಮ್ಮ ಅನೂಕೂಲಕ್ಕೆ ಬೇಕಾದಂತೆ ಬಳಸಿಕೊಳ್ಳುತ್ತಿದ್ದಾರೆ. ವಿಶ್ವದಾದ್ಯಂತ 40,000 ಕೊರೊನಾ ಸಂಬಂಧಿಸಿದ ಫೇಕ್ ಅಕೌಂಟ್ಗಳು ಡಬ್ಲ್ಯುಹೆಚ್‌ಒ ಮತ್ತು ಯುಎನ್‌ನ ಪ್ರತಿನಿಧಿಗಳ ಹೆಸರಿನಲ್ಲಿ ಇದೆ ಎಂಬ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.
ಕಳೆದ ಎರಡು ತಿಂಗಳುಗಳಲ್ಲಿ, ಸಾಂಕ್ರಾಮಿಕ ಕೊರೊನಾ ವೈರಸ್ ರೋಗದ ಮಾಹಿತಿ ನೀಡುವ ಸೋಗಿನಲ್ಲಿ 4,000 ದುರುದ್ದೇಶಪೂರಿತ ವೆಬ್‌ಸೈಟ್‌ಗಳು ಕಂಡುಬಂದಿವೆ. ಪ್ರಸ್ತುತ ದಿನದಲ್ಲಿ ಭಯ ಹುಟ್ಟಿಸಿರುವ ಕೊರೊನಾ ಬಿಕ್ಕಟ್ಟನ್ನು ಬಳಸಿಕೊಳ್ಳಲು ಹ್ಯಾಕರ್‌ಗಳು ಸೆರ್ಬರಸ್ ಟ್ರೋಜನ್ ಎಂಬ ಮಾಲ್‌ವೇರ್ ಬಳಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕೊರೊನಾ ಕುರಿತು ಜಾಗೃತಿ ಮೂಡಿಸುವ ನೆಪದಲ್ಲಿ, ಸೈಬರ್ ಅಪರಾಧಿಗಳು ಅನೇಕ ಬಳಕೆದಾರರಿಗೆ ಅನುಮಾನಾಸ್ಪದ ಲಿಂಕ್‌ಗಳನ್ನು ಕಳುಹಿಸುತ್ತಿದ್ದಾರೆ. ಆಕಸ್ಮಿಕವಾಗಿ ಜನರು ಈ ಲಿಂಕ್ ಅನ್ನು ಕ್ಲಿಕ್ ಮಾಡಿದರೆ, ಅವರ ಬ್ಯಾಂಕಿಂಗ್ ಪಾಸ್‌ವರ್ಡ್‌ಗಳು, ವಿಳಾಸಗಳು ಹ್ಯಾಕ್ ಆಗುತ್ತವೆ. ಎಂದು ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಸಿಬಿಐ) ಪೊಲೀಸ್ ಇಲಾಖೆ ಮತ್ತು ಕೇಂದ್ರ ಗುಪ್ತಚರ ಇಲಾಖೆ ಈ ಬಗ್ಗೆ ಎಚ್ಚರಿಕೆ ನೀಡಿದೆ.
ಈ ಮುಂಚೆ ಫಿಶಿಂಗ್ ಹಗರಣಗಳು ಸಾಮಾನ್ಯವಾಗಿತ್ತು. ಆದರೆ ಕೊರೊನಾ ವಿಶ್ವವ್ಯಾಪಿ ಆವರಿಸಿಕೊಂಡಾಗಿನಿಂದ ಸೈಬರ್ ಹಗರಣಗಳ ವ್ಯಾಪ್ತಿಯು ಹತ್ತು ಪಟ್ಟು ಹೆಚ್ಚಾಗಿದೆ. ದಾಳಿಕೋರರು ಸ್ಥಳೀಯ ಭಾಷೆ, ರಾಷ್ಟ್ರೀಯತೆ, ವ್ಯವಹಾರ, ಹಿತಾಸಕ್ತಿ ಇತ್ಯಾದಿಗಳನ್ನು ಆಧರಿಸಿ ಈ ಕೃತ್ಯಗಳನ್ನು ಎಸಗುತ್ತಿದ್ದಾರೆ ಎಂದು ತಿಳಿದುಬಂದಿದೆ.
ಲಾಕ್‌ಡೌನ್ ತಂದೊಡ್ಡಿದ ಸಂಕಷ್ಟದಿಂದಾಗಿ ಅನೇಕ ಉದ್ಯೋಗಿಗಳು ಮನೆಯಿಂದ ಕೆಲಸ ಮಾಡಲು ಕಂಪನಿಗಳಿಂದ ಒತ್ತಾಯಿಸಲ್ಪಡುತ್ತಿದ್ದು, ಕಚೇರಿಗಳಿಗೆ ಹೋಲಿಸಿದರೆ ಮನೆಯಲ್ಲಿ ಸೈಬರ್ ಸುರಕ್ಷತೆಯ ಕೊರತೆ ತೀವ್ರ ಕಡಿಮೆಯಾಗಿದ್ದು, ಇದು ಸೈಬರ್ ಅಪರಾಧಿಗಳಿಗೆ ವರದಾನವಾಗಿದೆ ಎಂದು ತಿಳಿದುಬಂದಿದೆ.
ನಾಲ್ಕು ವರ್ಷಗಳ ಹಿಂದೆ, ಪಾಕಿಸ್ತಾನ-ಸಂಬಂಧಿತ ಹ್ಯಾಕರ್‌ಗಳು ಭಾರತೀಯ ರಾಯಭಾರ ಕಚೇರಿಗಳ ಮೇಲೆ ದಾಳಿ ಮಾಡಲು ಕ್ರಿಮ್ಸನ್ ರಾಟ್ ಎಂಬ ಮಾಲ್‌ವೇರ್ ಅನ್ನು ಬಳಸಿ ನಕಲಿ ಇ-ಮೇಲ್ ಮೂಲಕ ಸಂದೇಶ ರವಾನಿಸಿದ್ದರು. ಅದೇ ರೀತಿ ಇದೀಗ ನಕಲಿ ಇ-ಮೇಲ್‌ಗಳನ್ನು ಬಳಸಿಕೊಳ್ಳುತ್ತಿರುವ ಹ್ಯಾಕರ್‌ಗಳು ಕೊರೊನಾ ವೈರಸ್ ಬಗ್ಗೆ ಮಾಹಿತಿ ನೀಡುವ ಹೆಸರಿನಲ್ಲಿ ಇ-ಮೇಲ್ ಕಳುಹಿಸಿ ಜನರನ್ನು ವಂಚನೆಗೊಳಿಸುತ್ತಿದ್ದಾರೆ ಎಂಬುದು ಅಘಾತಕಾರಿಯಾಗಿದೆ.
ಪ್ರಸ್ತುತ ಸನ್ನಿವೇಶದಲ್ಲಿ ಕೇವಲ ಕೊರೊನಾ ವೈರಸ್ ವಿರುದ್ಧ ಹೋರಾಡುವುದು ಮಾತ್ರವಲ್ಲದೇ, ಇಂತಹ ಸೈಬರ್ ಕಳ್ಳತನದ ಬಗೆಗೂ ವಿಶೇಷವಾದ ಜಾಗೃತಿ ವಹಿಸುವುದು ಅತ್ಯಂತ ಅವಶ್ಯವಾಗಿದೆ.