ನವದೆಹಲಿ: ಪಕ್ಷದ ಹಂಗಾಮಿ ಅಧ್ಯಕ್ಷರಾಗಿ ಸೋನಿಯಾ ಗಾಂಧಿ ಒಂದು ವರ್ಷ ಪೂರೈಸಿದ ಕೆಲವು ದಿನಗಳ ನಂತರ, ಕಾಂಗ್ರೆಸ್ ತನ್ನ ಕಾರ್ಯಕಾರಿ ಸಮಿತಿಯ ಸಭೆಯನ್ನು ಕರೆದಿದೆ. ಅಂದು ಪಕ್ಷದ ನಾಯಕತ್ವದ ಬಗ್ಗೆ ಚರ್ಚೆಯಾಗುವ ಸಾಧ್ಯತೆಯಿದೆ.
ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ಆಗಸ್ಟ್ 24ರಂದು ಬೆಳಿಗ್ಗೆ 11 ಗಂಟೆಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ನಡೆಯಲಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂಸ್ಥೆ) ಕೆ.ಸಿ.ವೇಣುಗೋಪಾಲ್ ಶನಿವಾರ ಟ್ವೀಟ್ನಲ್ಲಿ ತಿಳಿಸಿದ್ದಾರೆ.
ರಾಹುಲ್ ಗಾಂಧಿ ಅವರನ್ನು ಪಕ್ಷದ ಅಧ್ಯಕ್ಷರನ್ನಾಗಿ ನೇಮಕ ಮಾಡಬೇಕು ಎಂದು ಪಕ್ಷದ ಒಂದು ಬಣ ಧ್ವನಿ ಎತ್ತಿದೆ. ಚೀನಾದೊಂದಿಗಿನ ಗಡಿ ಉದ್ವಿಗ್ನತೆ ಸೇರಿದಂತೆ ಹಲವು ವಿಷಯಗಳ ಕುರಿತು ಮೋದಿಯವರ ವಿರುದ್ಧ ಪಕ್ಷದ ಪರವಾಗಿ ಸಮರ್ಪಕವಾಗಿ ಧ್ವನಿ ಎತ್ತಿದ್ದರು ಅನ್ನೋದು ಅವರ ಅಭಿಪ್ರಾಯ.
ಸೋನಿಯಾ ಗಾಂಧಿ ಈ ತಿಂಗಳ ಆರಂಭದಲ್ಲಿ ಪಕ್ಷದ ಮುಖ್ಯಸ್ಥರಾಗಿ ಒಂದು ವರ್ಷ ಪೂರೈಸಿದರು. 2019ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸತತ ಎರಡನೇ ಸೋಲು ಅನುಭವಿಸಿದ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಪಕ್ಷದ ಮುಖ್ಯಸ್ಥ ಸ್ಥಾನದಿಂದ ಕೆಳಗಿಳಿದ ನಂತರ ಅವರು ಎರಡನೇ ಬಾರಿಗೆ ಪಕ್ಷದ ಆಡಳಿತವನ್ನು ವಹಿಸಿಕೊಂಡರು.