ತಮಿಳುನಾಡಿನ ತೂತುಕುಡಿಯಲ್ಲಿ ಜೂನ್ 23 ರಂದು ಜಯರಾಜ್ (58) ಹಾಗೂ ಅವರ ಮಗ ಬೆನಿಕ್ಸ್ (31) ಎಂಬುವರು ಪೊಲೀಸ್ ಕಸ್ಟಡಿಯಲ್ಲಿರುವಾಗ ಸಾವನ್ನಪ್ಪಿದ ಘಟನೆಯಿಂದ ದೇಶಾದ್ಯಂತ ಭಾರೀ ಆಕ್ರೋಶ ಸ್ಫೋಟವಾಗುವಂತಾಗಿದೆ. ಲಾಕ್ಡೌನ್ನಲ್ಲಿ ಅಂಗಡಿ ತೆರೆದಿದ್ದನ್ನು ಪ್ರಶ್ನಿಸಿದ ಪೊಲೀಸರೊಂದಿಗೆ ವಾದ ಮಾಡಿದ ಕ್ಷುಲ್ಲಕ ಕಾರಣಕ್ಕೆ ಪೊಲೀಸರು ಇಬ್ಬರನ್ನೂ ಲಾಕಪ್ನಲ್ಲಿ ಹಿಂಸಿಸಿ ಸಾಯಿಸಿದ್ದಾರೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ.
ಭಾರತದಲ್ಲಿ ಲಾಕಪ್ ಡೆತ್ ಪ್ರಕರಣಗಳು ಹೊಸದೇನೂ ಅಲ್ಲ. ಆದರೆ ಕಾನೂನು ಗೌರವಿಸುವ ಹಾಗೂ ಸುಸಂಸ್ಕೃತ ಸಮಾಜಕ್ಕೆ ಇಂಥ ಘಟನೆಗಳು ಮಸಿ ಬಳಿಯುತ್ತಿವೆ. ಕಾನೂನು ರಕ್ಷಕರೇ ಜನರನ್ನು ಠಾಣೆಯಲ್ಲಿ ಬಡಿದು ಕೊಂದರೆ ಜನ ಯಾರನ್ನು ನಂಬುವುದು ಎಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ. ಈಗ ಸಾಮಾಜಿಕ ಮಾಧ್ಯಮಗಳು ಪ್ರಬಲವಾಗಿರುವ ಕಾರಣದಿಂದ ಪೊಲೀಸ್ ದೌರ್ಜನ್ಯ ಪ್ರಕರಣಗಳು ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿವೆ. ಕಳೆದ ಕೆಲ ವರ್ಷಗಳಲ್ಲಿ ಭಾರತದಲ್ಲಿ ಘಟಿಸಿದ ಲಾಕಪ್ ಡೆತ್ ಹಾಗೂ ಅಂಥ ಎಷ್ಟು ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗಿದೆ ಎಂಬುದನ್ನು ಈ ಸಂದರ್ಭದಲ್ಲಿ ತಿಳಿಯುವುದು ಅಗತ್ಯ.
2014 ರಿಂದ 2018 ರ ಮಧ್ಯೆ ಭಾರತದಲ್ಲಿ ನಡೆದ ಲಾಕಪ್ ಡೆತ್, ದಾಖಲಾದ ಪ್ರಕರಣಗಳು ಮತ್ತು ಶಿಕ್ಷೆಯ ಪ್ರಮಾಣದ ಅಂಕಿ ಅಂಶಗಳು ಹೀಗಿವೆ:
ವರ್ಷ | ಪೊಲೀಸರ ವಿರುದ್ಧ ದಾಖಲಾದ ಪ್ರಕರಣಗಳು | ಪೊಲೀಸ್ ಸಿಬ್ಬಂದಿ ವಿರುದ್ಧ ಚಾರ್ಜ್ಶೀಟ್ | ಅಪರಾಧಿ ಸಾಬೀತು | ದಾಖಲಾದ ಪ್ರಕರಣ ಮತ್ತು ಶಿಕ್ಷೆಯ ಶೇಕಡಾವಾರು ತುಲನೆ | ಚಾರ್ಜ್ಶೀಟ್ ಆದ ಪ್ರಕರಣಗಳು ಮತ್ತು ಶಿಕ್ಷೆಯ ಶೇಕಡಾವಾರು ತುಲನೆ | ಪೊಲೀಸ್ ಕಸ್ಟಡಿಯಲ್ಲಿ ಸಂಭವಿಸಿದ ಸಾವಿನ ಸಂಖ್ಯೆಗಳು |
2018 | 5479 | 918 | 41 | 0.74% | 4.4% | 70 |
2017 | 2005 | 1000 | 128 | 6.3% | 12.8% | 100 |
2016 | 3082 | 1104 | 31 | 1.0% | 2.80% | 92 |
2015 | 5526 | 1122 | 25 | 0.45% | 2.22% | 67 |
2014 | 2601 | 1132 | 44 | 1.69% | 3.88% | 61 |
(Source: NCRB Reports)
ಟಾರ್ಚರ್ ಇಂಡಿಯಾದ 2019 ರ ವಾರ್ಷಿಕ ವರದಿಯ ಪ್ರಕಾರ ದೇಶದಲ್ಲಿ ನ್ಯಾಯಾಂಗ ಬಂಧನದಲ್ಲಿ 1,606 ಹಾಗೂ ಪೊಲೀಸ್ ಕಸ್ಟಡಿಯಲ್ಲಿ 125 ಸಾವುಗಳು ಘಟಿಸಿವೆ.
ಪೊಲೀಸ್ ಕಾರ್ಯಕ್ಷಮತೆಯ ಬಗ್ಗೆ ವಿವಿಧ ಸಮೀಕ್ಷಾ ವರದಿಗಳು ಏನು ಹೇಳುತ್ತವೆ?
* ಸಿಎಸ್ಡಿಎಸ್ ಲೋಕನೀತಿ ನಡೆಸಿದ ಸಮೀಕ್ಷೆಯ ಪ್ರಕಾರ ಶೇ 25 ಕ್ಕೂ ಕಡಿಮೆ ಭಾರತೀಯರು ಪೊಲೀಸರ ಮೇಲೆ ಹೆಚ್ಚಿನ ವಿಶ್ವಾಸ ಇದೆ ಎಂದು ಹೇಳಿದ್ದಾರೆ. ಇದೇ ಸಮಯದಲ್ಲಿ ಶೇ.54 ರಷ್ಟು ಭಾರತೀಯರು ಸೈನಿಕರ ಮೇಲೆ ಹೆಚ್ಚು ವಿಶ್ವಾಸವಿಟ್ಟಿದ್ದಾರೆ. (2018 ರ ಸಮೀಕ್ಷೆಯ ಪ್ರಕಾರ)
* ಭಾರತದಲ್ಲಿ ಪೊಲೀಸ್ ವ್ಯವಸ್ಥೆಯ ಸ್ಥಿತಿಗತಿಯ ಕುರಿತ 2019 ರ ವರದಿಯ ಪ್ರಕಾರ (ಕಾಮನ್ ಕಾಸ್-ಸಿಎಸ್ಡಿಎಸ್ 2018), ಪ್ರತಿ ಐವರು ಭಾರತೀಯರಲ್ಲಿ ಇಬ್ಬರು ಪೊಲೀಸರ ಬಳಿ ಹೋಗಲು ಹೆದರುತ್ತಾರೆ.
* ಪೊಲೀಸರ ದುರ್ನಡತೆಯ ಕಾರಣದಿಂದ ನಾಲ್ಕರಲ್ಲಿ ಮೂರರಷ್ಟು ಭಾರತೀಯರು ಪೊಲೀಸರಿಗೆ ದೂರು ನೀಡಲು ಮುಂದಾಗುವುದೇ ಇಲ್ಲವೆಂದು ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸ್ ಸಮೀಕ್ಷಾ ವರದಿ (2018) ಹೇಳಿದೆ.